ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ವಿರೋಧಿಸುವ ಭರದಲ್ಲಿ ಅಸಂಬದ್ಧ ಮಾತನಾಡಿದ್ದ ನಟ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ.
ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡುವಾಗ ಇವರು ಆಡಿದ್ದ ಮಾತು ಬಹಳ ಟ್ರೋಲ್ ಆಗುತ್ತಿದೆ. ಅವರು ಹೇಳಿದ್ದೇನೆಂದರೆ, “ಗುಜರಾತ್ ರಾಜ್ಯದ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ. ಆದರೆ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನಲ್ಲ. ಗ್ಯಾಸ್ ಸಿಲಿಂಡರ್ ದುಬಾರಿಯಾಗಿದೆ. ರೋಹಿಂಗ್ಯ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದೆಹಲಿಯಂತೆ ಇಲ್ಲಿಯೂ ನಿಮ್ಮ ಸುತ್ತಮುತ್ತ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್ಗಳೊಂದಿಗೆ ನೀವು ಏನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ?” ಎಂದು ಕೇಳಿದ್ದರು.
ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ? ಎಂಬ ಮಾತು ಬಂಗಾಳಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪರೇಶ್ ರಾವಲ್ ಅವರ ಈ ಹೇಳಿಕೆಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಪರೇಶ್ ಮಾತುಗಳು ಬಂಗಾಳಿಗಳ ವಿರುದ್ಧದ ದ್ವೇಷದ ಭಾಷಣ ಎಂಬು ಹಲವರು ಹೇಳಿದ್ದರು.
ಇದರಿಂದಾಗಿ ಈಗ ನಟ ಕ್ಷಮೆ ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ಖಂಡಿತವಾಗಿ ಮೀನಿನ ವಿಚಾರ ಒಂದು ಸಮಸ್ಯೆಯಲ್ಲ, ಏಕೆಂದರೆ ಗುಜರಾತಿಗಳು ಕೂಡ ಮೀನು ತಿನ್ನುತ್ತಾರೆ. ಬಂಗಾಳಿ ಎಂದು ಹೇಳುವ ಮೂಲಕ ನಾನು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನು ಉಲ್ಲೇಖಿಸಿದ್ದೆ. ಆದರೂ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.