ಹಾವೇರಿ : ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಬಾಲಕರ ಶವವನ್ನು ಪೋಷಕರು ಉಪ್ಪಿನಲ್ಲಿ ಹೂತಿಟ್ಟು..ಮತ್ತೆ ಬದುಕಿ ಬರುತ್ತಾರೆ ಎಂದು ಕೆಲಹೊತ್ತು ಕಾದು ಕುಳಿತ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಲಪೂಜೆ ಗ್ರಾಮದಲ್ಲಿ ನಾಗರಾಜ ಲಂಕೇರ (11) ಹಾಗೂ ಹೇಮಂತ ಹರಿಜನ (12) ಎಂಬುವವರು ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದರು. ನಂತರ ಗ್ರಾಮಸ್ಥರು ಬಾಲಕರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದರು. ಅಷ್ಟರಲ್ಲೇ ಯಾರೋ ಉಪ್ಪಿನಲ್ಲಿ ಮಕ್ಕಳ ಮೃತದೇಹಗಳ್ನು ಹೂತಿಟ್ಟರೇ ಮರಳಿ ಬದುಕಿ ಬರುತ್ತಾರೆ , ಉಸಿರಾಡುತ್ತಾರೆ ಎಂದು ಹೇಳಿದ್ದಾರೆ ಅನಿಸುತ್ತೆ. ಇದನ್ನು ನಂಬಿದ ಪೋಷಕರು ಹಾಗೂ ಕುಟುಂಬದವರು ಉಪ್ಪುನ್ನು ತರಿಸಿ ಮಕ್ಕಳನ್ನು ಹೂತಿಟ್ಟಿದ್ದಾರೆ. ನಂತರ ಮಕ್ಕಳು ಈಗ ಉಸಿರಾಡುತ್ತಾರೆ, ಆಗ ಉಸಿರಾಡುತ್ತಾರೆ ಎಂದು ಕಾದು ಕುಳಿತಿದ್ದಾರೆ. ಎಷ್ಟೇ ಹೊತ್ತು ಕಾದರೂ, ಗೋಗರೆದರೂ ಮಕ್ಕಳು ಉಸಿರಾಡಲಿಲ್ಲ.
ಅಷ್ಟರಲ್ಲೇ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೊಲೀಸರು ಪೋಷಕರು ಹಾಗೂ ಕುಟುಂಬದವರಿಗೆ ಇಂತಹ ಮೂಢನಂಬಿಕೆಗಳನ್ನು ನಂಬಬೇಡಿ, ಮೃತದೇಹವನ್ನು ಇಟ್ಟುಕೊಂಡು ಈ ರೀತಿ ಮಾಡಬೇಡಿ ಎಂದು ಮುಂದಿನ ಕಾರ್ಯ ಮಾಡಲು ಸೂಚನೆ ನೀಡಿದರು. ನಂತರ ಪೋಷಕರು ಮಕ್ಕಳ ಅಂತ್ಯಸಂಸ್ಕಾರ ಮಾಡಿದ್ದಾರೆ.