
ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿಪುರ ಬಡಾವಣೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಪೋಷಕರು ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರು ನೀಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನೋಬನಗರ ಠಾಣೆ ಪೊಲೀಸರಿಗೆ ಎಸ್ಪಿ ಸೂಚನೆ ನೀಡಿದ್ದಾರೆ.
ಯುವತಿ ಹಾಗೂ ಯುವಕ ಅನ್ಯ ಜಾತಿಯವರಾಗಿದ್ದಾರೆ. ಯುವತಿ ಪದವಿ ವ್ಯಾಸಂಗ ಮಾಡಿಕೊಂಡಿದ್ದು, ಯುವಕ ಗೋಬಿ, ಫ್ರೈಡ್ ರೈಸ್ ಅಂಗಡಿ ಮಾಡಿಕೊಂಡಿದ್ದಾನೆ. ಪ್ರೇಮಿಗಳು ಆ. 15 ರಂದು ತಮಿಳುನಾಡಿನ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ. ಮಗಳು ನಾಪತ್ತೆಯಾದ ಬಗ್ಗೆ ಪೋಷಕರು ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ಪತ್ತೆ ಮಾಡಿಕೊಂಡು ಬಂದಿದ್ದಾರೆ.
ಇಬ್ಬರೂ ವಯಸ್ಕರಾಗಿರುವುದರಿಂದ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಮದುವೆಗೆ ಒಪ್ಪದ ಯುವತಿಯ ಪೋಷಕರು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಯುವತಿ ಎಸ್.ಪಿ. ಕಚೇರಿಗೆ ತೆರಳಿ ದೂರು ನೀಡಿದ್ದಾರೆ.