ಹಾವೇರಿ: ಪೋಷಕರ ಆಸ್ತಿ ಪಡೆದುಕೊಂಡು ಅವರನ್ನು ಬೀದಿಪಾಲು ಮಾಡಿದ್ದ ಮಕ್ಕಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ. ಮಕ್ಕಳಿಗೆ ನೀಡಲಾಗಿದ್ದ ಆಸ್ತಿಯನ್ನು ಮರಳಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಹಾನಗಲ್ಲ ಹಿರೇಬಾಸೂರು ಗ್ರಾಮದ ರುದ್ರಗೌಡ ಪಾಟೀಲ(80) ಮತ್ತು ಅವರ ಪತ್ನಿ ನೀಲಮ್ಮ ಅವರನ್ನು ಮಕ್ಕಳು ನಿರ್ಲಕ್ಷಿಸಿದ್ದರು. ತಂದೆಯಿಂದ ಎಲ್ಲಾ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದ ಮಕ್ಕಳು ಬೇರೆಯಾಗಿದ್ದರು. ಆಸ್ತಿ ಪಡೆದುಕೊಂಡು ತಮ್ಮನ್ನು ನಿರ್ಲಕ್ಷಿಸಿದ್ದರಿಂದ ಬೇಸತ್ತ ದಂಪತಿ ಸವಣೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ನ್ಯಾಯಮಂಡಳಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ಉಪವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದುಕಮ್ಮನವರ ಅವರು ವಿಚಾರಣೆ ಪೂರ್ಣಗೊಳಿಸಿ ಆದೇಶ ನೀಡಿದ್ದು, ಮಕ್ಕಳು ತಮ್ಮ ಹೆಸರಿಗೆ ಆಸ್ತಿ ಬರೆಸಿಕೊಂಡು ಪೋಷಕರಿಂದ ದೂರವಾಗಿದ್ದಾರೆ. ಆಸ್ತಿ ಮೇಲಿನ ಸಾಲ ತೀರಿಸಿಲ್ಲ. ದಂಪತಿಗಳ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂಬುದನ್ನು ಮನಗಂಡು 5.09 ಎಕರೆ ಆಸ್ತಿಯನ್ನು ಮರಳಿ ರುದ್ರಗೌಡ ಪಾಟೀಲ್ ಅವರ ಹೆಸರಿಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದಾರೆ.
ಅಲ್ಲದೇ, ತಹಶೀಲ್ದಾರ್ ಪಿ.ಎಸ್. ಎರಿಸ್ವಾಮಿ ಅವರೊಂದಿಗೆ ಹಿರೇಬಾಸೂರು ಗ್ರಾಮಕ್ಕೆ ತೆರಳಿದ ಉಪವಿಭಾಗಾಧಿಕಾರಿ ಅನ್ನಪೂರ್ಣ ಅವರು ರುದ್ರಗೌಡ ಪಾಟೀಲ ದಂಪತಿಗೆ ಆಸ್ತಿಯನ್ನು ವರ್ಗಾಯಿಸಿದ ದಾಖಲೆಗಳನ್ನು ನೀಡಿದ್ದಾರೆ. ಈ ಮೂಲಕ ಪಾಲಕರನ್ನು ನಿರ್ಲಕ್ಷಿಸಿದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ್ದಾರೆ.