ಬೆಂಗಳೂರು: ವೃದ್ಧ ತಾಯಿಯ ಜೀವನ ನಿರ್ವಹಣೆಗಾಗಿ ಜೀವನಾಂಶ ನೀಡಲು ಒಪ್ಪದ ಇಬ್ಬರು ಮಕ್ಕಳಿಗೆ ಹೈಕೋರ್ಟ್ ದಂಡ ವಿಧಿಸಿದೆ. ಮಾಸಿಕ ತಲಾ 10 ಸಾವಿರ ರೂಪಾಯಿ ಪಾವತಿಸುವಂತೆ ಮೈಸೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೃದಯ ಇಬ್ಬರು ಪುತ್ರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, 5000 ರೂ. ದಂಡ ವಿಧಿಸಿದೆ.
ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕ ರಕ್ಷಣಾ ಕಾಯ್ದೆಯಡಿ 84 ವರ್ಷದ ವೆಂಕಟಮ್ಮ ಅವರಿಗೆ ಮಾಸಿಕ 5,000 ಜೀವನಾಂಶ ಪಾವತಿಸುವಂತೆ ಮೈಸೂರು ಉಪ ವಿಭಾಗಾಧಿಕಾರಿ ಆದೇಶ ನೀಡಿದ್ದರು. ಮೈಸೂರು ಜಿಲ್ಲಾಧಿಕಾರಿ ಈ ಜೀವನಾಂಶ ಮೊತ್ತವನ್ನು 10,000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು. ಎರಡೂ ಆದೇಶಗಳನ್ನು ರದ್ದು ಮಾಡುವಂತೆ ವೆಂಕಟಮ್ಮ ಅವರ ಪುತ್ರರಾದ ಗೋಪಾಲ್ ಮತ್ತು ಮಹೇಶ್ ಹೈಕೋರ್ಟಿಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ದಂಡ ವಿಧಿಸಿದೆ. ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ತಕರಾರರು ಅರ್ಜಿ ವಜಾಗೊಳಿಸಿದೆ. ದಂಡದ ಮೊತ್ತವನ್ನು ಅರ್ಜಿದಾರರಿಬ್ಬರೂ ಒಟ್ಟಾಗಿ ವೃದ್ಧ ತಾಯಿಗೆ ಒಂದು ತಿಂಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಹಣ ಪಾವತಿಸುವವರೆಗೂ ಪ್ರತಿದಿನ 100 ರೂಪಾಯಿ ಹೆಚ್ಚುವರಿಯಾಗಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಪುತ್ರರು ದೂರ ಮಾಡಿರುವ ತಾಯಿಯನ್ನು ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ವೃದ್ಧೆ ರಸ್ತೆಯ ಮೇಲಿರಬೇಕಿತ್ತು. 10000 ರೂ. ಜೀವನಾಂಶ ಹೆಚ್ಚು ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ, ರಕ್ತಕ್ಕಿಂತ ರೊಟ್ಟಿ ದುಬಾರಿಯಾಗಿರುವ ಕಾಲದಲ್ಲಿ ನಾವಿದ್ದೇವೆ. ಬೆಲೆಗಳು ಏರಿಕೆಯಾಗುತ್ತಿವೆ ಎಂದು ಹೈಕೋರ್ಟ್ ಹೇಳಿದೆ.
ಸಂಧ್ಯಾ ಕಾಲದಲ್ಲಿರುವ ತಾಯಿಯನ್ನು ನೋಡಿಕೊಳ್ಳುವುದು ಪುತ್ರರ ಜವಾಬ್ದಾರಿ. ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ, ಆಚಾರ್ಯ ದೇವೋಭವ ಎಂದು ಉಪನಿಷತ್ ನಲ್ಲಿ ಹೇಳಲಾಗಿದೆ. ವೃದ್ಧಾಪ್ಯದಲ್ಲಿರುವ ಪಾಲಕರನ್ನು ನಿರ್ಲಕ್ಷಿಸುವುದು ಹೇಯ ಕೃತ್ಯವಾಗಿದ್ದು, ಅದಕ್ಕೆ ಪ್ರಾಯಶ್ಚಿತ್ತವಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.