ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ ಜೊತೆ ಮಲಗ್ತಾರೆ. ಹೀಗೆ ಮಾಡುವುದರಿಂದ ಅನೇಕ ಉಪಯೋಗಗಳಿವೆ.
ಸುರಕ್ಷಿತ ಭಾವನೆ : ಸಾಮಾನ್ಯವಾಗಿ ಮಕ್ಕಳಿಗೆ ರಾತ್ರಿ ಎಂದ್ರೆ ಭಯ. ಕತ್ತಲಲ್ಲಿ ಒಬ್ಬರೇ ಮಲಗಿದಾಗ ಅವರು ಭಯಗೊಳ್ತಾರೆ. ನಿದ್ದೆಯಲ್ಲಿ ಎದ್ದು ಅಳುವುದುಂಟು. ಅಸುರಕ್ಷಿತವಾಗಿದ್ದೇವೆಂಬ ಭಾವನೆ ಬೆಳೆಯುತ್ತದೆ. ಅಪ್ಪ-ಅಮ್ಮನ ತೋಳು ಅವರಿಗೆ ಸುರಕ್ಷಿತ ಭಾವನೆ ನೀಡುತ್ತದೆ.
ಆರೋಗ್ಯದಲ್ಲಿ ವೃದ್ಧಿ : ಸರಿಯಾದ ಸಮಯಕ್ಕೆ ಮಲಗಿದ್ರೆ ಒಳ್ಳೆಯ ನಿದ್ದೆ ಬರುವ ಜೊತೆಗೆ ಆರೋಗ್ಯ ಕೂಡ ಸರಿಯಾಗಿರುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಪ್ರತಿದಿನ ಒಂದೇ ಸಮಯದಲ್ಲಿ ಮಕ್ಕಳು ನಿದ್ದೆ ಮಾಡುವ ಪದ್ಧತಿಯನ್ನು ಅಭ್ಯಾಸ ಮಾಡಿಸಲು ಪಾಲಕರು ಅವರ ಜೊತೆ ಮಲಗುವುದು ಅವಶ್ಯ.
ಮಾನಸಿಕವಾಗಿ ಹತ್ತಿರವಾಗ್ತಾರೆ : ಮಕ್ಕಳ ಜೊತೆ ಪಾಲಕರು ಮಲಗುವುದರಿಂದ ಮಲಗುವ ವೇಳೆ ಮಕ್ಕಳ ದಿನಚರಿಯನ್ನು ಆರಾಮವಾಗಿ ಕೇಳಿ ತಿಳಿದುಕೊಳ್ಳಬಹುದು. ಈ ವೇಳೆ ಮಕ್ಕಳಿಗೆ ಯಾವುದಾದ್ರೂ ಸಮಸ್ಯೆ ಇದ್ದಲ್ಲಿ ಮುಕ್ತವಾಗಿ ಪಾಲಕರ ಮುಂದೆ ಹೇಳುತ್ತಾರೆ. ಜೊತೆಗೆ ಟೆನ್ಷನ್ ಇಲ್ಲದೆ ನಿದ್ದೆ ಮಾಡ್ತಾರೆ.
ಸಮಯ ಕಳೆಯಲು : ಕೆಲ ಮಕ್ಕಳಿಗೆ ರಾತ್ರಿ ಮಲಗುವಾಗ ಪಾಲಕರು ಕಥೆ ಹೇಳಲೇ ಬೇಕು. ಅವರಿಗೆ ಕಥೆ ಹೇಳಿದ್ರೆ ನಿದ್ದೆ ಬರುತ್ತೆ ಎಂದಲ್ಲ. ಅವರು ಈ ಸಮಯವನ್ನು ಪಾಲಕರ ಜೊತೆ ಕಳೆಯಲು ಇಷ್ಟಪಡ್ತಾರೆ. ಹಾಗಾಗಿ ದಿನದಲ್ಲಿ ಮಕ್ಕಳ ಜೊತೆ ಸಮಯ ಕಳೆಯಲು ಆಗದ ಪಾಲಕರು ಅವಶ್ಯವಾಗಿ ರಾತ್ರಿ ಅವರ ಜೊತೆ ಮಲಗಿ.
ಒಳ್ಳೆಯ ಸಂಸ್ಕಾರ : ರಾತ್ರಿ ಮಕ್ಕಳ ಜೊತೆ ಮಲಗುವಾಗ ಪಾಲಕರು ಒಳ್ಳೊಳ್ಳೆ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಹೇಳಬಹುದು. ಕಥೆಯ ರೂಪದಲ್ಲಿ ಈ ವಿಷಯಗಳನ್ನು ಮಕ್ಕಳಿಗೆ ಹೇಳಿದ್ರೆ ಮಕ್ಕಳು ಎಂದಿಗೂ ಮರೆಯುವುದಿಲ್ಲ.
ಸ್ವಾಭಿಮಾನದ ವೃದ್ಧಿ : ಪಾಲಕರ ಜೊತೆ ಮಲಗುವ ಮಕ್ಕಳು ಸ್ವಾಭಿಮಾನಿಗಳಾಗಿರುತ್ತಾರೆ. ಪಾಲಕರ ತೋಳಿನಲ್ಲಿ ಯಾವುದೇ ಒತ್ತಡವಿಲ್ಲದೆ ಅವರು ಮಲಗುವುದರಿಂದ ನೆಮ್ಮದಿ ಜೊತೆಗೆ ಅವರಿಗೆ ಖುಷಿ ಸಿಗುತ್ತದೆ.