ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ, ನೋಟ್ ಬುಕ್, ಲೇಖನ ಸಾಮಗ್ರಿ ಖರೀದಿಸುವಂತೆ ಪೋಷಕರ ಮೇಲೆ ಒತ್ತಾಯದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯಿದೆ ನಿಯಮ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಸಿಬಿಎಸ್ಇ ಮಾನ್ಯತಾ ಬೈಲಾ, ಹೈಕೋರ್ಟ್ ತೀರ್ಪು ಅನ್ವಯ ಶಾಲೆಗಳಲ್ಲಿ ಸಮವಸ್ತ್ರ ಮಾರಾಟ ಅಥವಾ ಇಂತಹುದೇ ಮಾರಾಟಗಾರರಿಂದ ಖರೀದಿಸುವಂತೆ ಒತ್ತಡ ಹೇರುವಂತಿಲ್ಲ. ಒಂದು ವೇಳೆ ಅಂತಹ ಪ್ರಕರಣ ನಡೆದಲ್ಲಿ ತಪ್ಪಿತಸ್ಥ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಲಾಗಿದೆ.
2019ರಲ್ಲಿಯೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಮತ್ತೆ ಪರಿಷ್ಕರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ರವಾನಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಬಹುತೇಕ ಖಾಸಗಿ ಶಾಲೆ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯಲ್ಲಿಯೇ ಸಮವಸ್ತ್ರ, ನೋಟ್ ಪುಸ್ತಕ, ಬ್ಯಾಗ್ ಇತರೆ ಪರಿಕರಗಳನ್ನು ಇಂತಹುದೇ ಕಂಪನಿಯಿಂದ ಖರೀದಿಸುವಂತೆ ತಾಕೀತು ಮಾಡುತ್ತಿವೆ. ಇದರ ವಿರುದ್ಧ ಪೋಷಕರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.