
ದಾವಣಗೆರೆ: ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ದತ್ತು ಪಡೆದವರ ವಿರುದ್ದ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ ತನಿಖೆಗೆ ಸೂಚಿಸಲಾಗಿದೆ.
ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ದಾಸಪ್ಪರ ರಾಜಪ್ಪ ಅವರ ಪತ್ನಿ ಮಂಜುಳಾ ಇವರು ಅನಧಿಕೃತವಾಗಿ ಸುಮಾರು 4 ತಿಂಗಳ ಹೆಣ್ಣು ಮಗುವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿ-1098 ಕ್ಕೆ ಬಂದ ದೂರವಾಣಿ ಕರೆ ಬಂದಿದೆ.
ಅದರನ್ವಯ ಮೇ 24 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರತಿಭಾ ಎಂ.ಹೆಚ್., ಚಂದ್ರಶೇಖರ್ ಎನ್.ಕೆ. ಹಾಗೂ ಆಪ್ತ ಸಮಾಲೋಚಕರಾದ ಶ್ವೇತಾ ಐ.ಎಂ ಸ್ಥಳಕ್ಕೆ ಭೇಟಿ ನೀಡಿದಾಗ ಮಂಜುಳಾ ಅವರು ಹಾಜರಿದ್ದು, ಅವರ ಜೊತೆ ಸುಮಾರು 4 ತಿಂಗಳ ಹೆಣ್ಣು ನವಜಾತ ಶಿಶು ಇರುವುದು ಕಂಡು ಬಂದಿದೆ.
ಮಗುವಿನ ಬಗ್ಗೆ ಮಾಹಿತಿ ಕೇಳಿದಾಗ ಈ ಮಗು ನನಗೆ ಪರಿಚಯ ಇರುವ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇ ಹೊಸೂರು ಗ್ರಾಮದ ಕುಸುಮಾ(30) ಅವರಿಗೆ ಇವರಿಗೆ ಹಾವೇರಿ ಜಿಲ್ಲೆ ಬ್ಯಾಡಗಿಯ ವೈದ್ಯರಾದ ಚೈತುನಬಿ ಮ, ಸೌದಾಗರ(ಪಾರಂಪರಿಕ ಹಾಗೂ ತರಬೇತಿ ಹೊಂದಿದ ದಾಯಿ) ಇವರ ಮನೆಯಲ್ಲಿ ಹೆರಿಗೆ ಆಗಿದ್ದು, ಇವರಿಂದ ನಾವು ಮಗು ಪಡೆದುಕೊಂಡು ನಾವೇ ತಂದೆ- ತಾಯಿ ಎಂದು ಬ್ಯಾಡಗಿ ಪುರಸಭೆ ಕಾರ್ಯಾಲಯದಲ್ಲಿ ಜನನ ಪ್ರಮಾಣ ಪತ್ರವನ್ನು ಸಹ ಪಡೆದಿರುತ್ತೇವೆಂದು ತಿಳಿಸಿದ್ದಾರೆ.
ಈ ಖಚಿತ ಮಾಹಿತಿ ಮೇರೆಗೆ ಬಾಲನ್ಯಾಯ ಕಾಯ್ದೆ-2015 ರಡಿಯಲ್ಲಿ ಈ ಮಗುವನ್ನು ಅನಧಿಕೃತವಾಗಿ ಪಡೆದುಕೊಂಡು ಜನನ ಪ್ರಮಾಣ ಪತ್ರವನ್ನು ಸಹ ಸುಳ್ಳು ದಾಖಲಾತಿ ಮುಖಾಂತರ ಸೃಷ್ಟಿಸಿಕೊಂಡಿರುವುದು ಕಾನೂನು ಉಲ್ಲಂಘನೆಯಾಗಿರುತ್ತದೆ. ಆದುದರಿಂದ ಮಗುವನ್ನು ನೀಡಿದವರು, ಪಡೆದವರು ಮತ್ತು ಜನನ ಪ್ರಮಾಣ ಪತ್ರ ಸೃಷ್ಟಿಸಲು ಸಹಕಾರ ನೀಡಿದ ಎಲ್ಲರ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ.ಎನ್, ಇವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.