ಹಿಂದಿನ ಕಾಲದಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಸಮಸ್ಯೆ ಕಾಡಲು ಶುರುವಾಗ್ತಿತ್ತು. ಆದ್ರೀಗ ಮಕ್ಕಳೂ ಗ್ಲಾಸ್ ಧರಿಸುವಂತಾಗಿದೆ. ಈಗಿನ ಜೀವನಶೈಲಿ ಇದಕ್ಕೆಲ್ಲ ಕಾರಣ. ಆಹಾರದ ಜೊತೆಗೆ ಟಿವಿ, ಮೊಬೈಲ್, ವಿಡಿಯೋ ಗೇಮ್ ಮಕ್ಕಳ ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರಿಗೆ ತೋರಿಸಿ. ಇಲ್ಲವಾದ್ರೆ ಕಣ್ಣಿನ ಸಮಸ್ಯೆ ಜಾಸ್ತಿಯಾಗಿ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ಮಕ್ಕಳಿಗೆ ತಲೆ ನೋವು ಬರೋದು ಸಾಮಾನ್ಯ ವಿಷಯವಲ್ಲ. ನಿಮ್ಮ ಮಕ್ಕಳಿಗೆ ಪದೇ ಪದೇ ತಲೆನೋವು ಬರುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ದೃಷ್ಟಿ ದುರ್ಬಲವಾಗುವುದರ ಮೊದಲ ಲಕ್ಷಣ ಇದು.
ಮಲಗುವ ವೇಳೆ ಅಥವಾ ಧೂಳು ಕಣ್ಣು ಸೇರಿದಾಗ ಮಕ್ಕಳು ಕಣ್ಣನ್ನು ಉಜ್ಜಿಕೊಳ್ತಾರೆ. ಇದು ಸಾಮಾನ್ಯ ಸಂಗತಿ. ಆದ್ರೆ ದಿನದಲ್ಲಿ ಬಹಳ ಸಮಯ ಮಕ್ಕಳು ಕಣ್ಣನ್ನು ಉಜ್ಜಿಕೊಳ್ಳುತ್ತಿದ್ದರೆ ಇದು ಕೂಡ ದೃಷ್ಟಿ ದುರ್ಬಲವಾಗುತ್ತಿದೆ ಎಂಬುದರ ಲಕ್ಷಣವಾಗಿದೆ.
ದೊಡ್ಡ ಬೆಳಕಿನಲ್ಲಿ ಸರಿಯಾಗಿ ಕಣ್ಣು ಬಿಡಲು ಮಕ್ಕಳು ತೊಂದರೆ ಅನುಭವಿಸುತ್ತಿದ್ದರೆ ಇಲ್ಲ ದೊಡ್ಡ ಬೆಳಕು ಬರ್ತಿದ್ದಂತೆ ಕಣ್ಣನ್ನು ಮುಚ್ಚಿಕೊಳ್ಳುತ್ತಿದ್ದರೆ ಪಾಲಕರು ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ವಿಟಮಿನ್ ಕೊರತೆಯಿಂದ ಈ ಸಮಸ್ಯೆಯಾಗುತ್ತದೆ. ಹಾಗಾಗಿ ವಿಟಮಿನ್ ಎ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ.
ಮಕ್ಕಳು ಒಂದು ಕಣ್ಣು ಮುಚ್ಚಿಕೊಂಡು ಟಿವಿ ನೋಡೋದು ಅಥವಾ ಆಟವಾಡೋದು ಮಾಡ್ತಿದ್ದರೆ ತಡ ಮಾಡಬೇಡಿ. ಇದು ಕಣ್ಣಿನ ದೌರ್ಬಲ್ಯದ ಸಂಕೇತವಾಗಿದೆ. ಒಳ್ಳೆ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಿ.
ಪುಸ್ತಕವನ್ನು ಕಣ್ಣಿಗೆ ಹತ್ತಿರವಾಗಿ ಹಿಡಿದಿದ್ದರೆ ಅಥವಾ ಟಿವಿಯನ್ನು ಹತ್ತಿರ ಹೋಗಿ ನೋಡುತ್ತಿದ್ದರೆ ಮಕ್ಕಳು ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆಂದು ಅರ್ಥ. ಮಕ್ಕಳನ್ನು ಆದಷ್ಟು ಬೇಗ ವೈದ್ಯರ ಬಳಿ ಕರೆದೊಯ್ಯುವುದು ಬೆಸ್ಟ್.