ತಾಯಿ ಪ್ರೀತಿಗೆ ಯಾವುದೇ ಎಲ್ಲೆ ಇಲ್ಲ ಎಂದು ಹೇಳ್ತಾರೆ. ಆದರೆ ಈ ಕತೆ ಕೇಳಿದ್ರೆ ತಾಯಿ ಪ್ರೀತಿಗೂ ಎಲ್ಲೆ ಇದೆ ಅಂತಾನೇ ಹೇಳಬಹುದು. ಉತ್ತರ ಇಟಾಲಿಯನ್ನ ನಗರವಾದ ಪಾವಿಯಾ ಎಂಬಲ್ಲಿ 75 ವರ್ಷದ ಮಹಿಳೆಯೊಬ್ಬರು ಕೋರ್ಟ್ನಲ್ಲಿ ತನ್ನ 40 ಹಾಗೂ 42 ವರ್ಷದ ಪುತ್ರರನ್ನು ಮನೆಯಿಂದ ಹೊರಹಾಕುವಂತೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು ಮಾತ್ರವಲ್ಲದೇ ಈ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಇಬ್ಬರು ಪುತ್ರರು ಮನೆಗೆ ಆರ್ಥಿಕವಾಗಿ ಯಾವುದೇ ರೀತಿಯ ಸಹಾಯ ಮಾಡದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದು ತಾಯಿಯ ಆರೋಪವಾಗಿತ್ತು. ಪಾವಿಯಾ ಜಿಲ್ಲಾ ನ್ಯಾಯಾಲಯದಲ್ಲಿ ವೃದ್ಧೆಯು ಈ ಕೇಸ್ ಗೆದ್ದಿದ್ದಾರೆ. ಇಬ್ಬರೂ ಪುತ್ರರಿಗೆ ಸ್ವಂತ ಉದ್ಯೋಗ ಇದೆ ಎಂದು ಕೋರ್ಟ್ ಹೇಳಿದೆ.
ಅರ್ಜಿ ಅಲಿಸಿದ ನ್ಯಾಯಾಧೀಶ ಸಿಮೋನಾ ಕ್ಯಾಟರ್ಬಿ ನಿವೃತ್ತ ತಾಯಿಯ ಪರವಾಗಿ ತೀರ್ಪು ನೀಡಿದ್ದಾರೆ. ಈ ಇಬ್ಬರು ಪುತ್ರರ ತಂದೆಯಿಂದ ಬೇರ್ಪಟ್ಟಿರುವ ವೃದ್ಧೆಗೆ ಬರುವ ಪಿಂಚಣಿ ಹಣ, ಅವರ ಆಹಾರ ಹಾಗೂ ಮನೆ ನಿರ್ವಹಣೆಗೆ ಅಗುತ್ತದೆ; ಈ ವಯಸ್ಸಿನಲ್ಲಿ ಇಷ್ಟು ದೊಡ್ಡ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳುವುದು ವೃದ್ಧೆಗೆ ಕಷ್ಟ. ಹೀಗಾಗಿ ಅವರನ್ನು ಮನೆಯಿಂದ ಹೊರಹಾಕಲು ತಾಯಿಗೆ ಅನುಮತಿಯಿದೆ ಎಂದು ತೀರ್ಪು ನೀಡಿದ್ದಾರೆ.
ಅಲ್ಲಿನ ಸ್ಥಳೀಯ ಪತ್ರಿಕೆ ಪ್ರಕಟಿಸಿದ ವರದಿಯ ಪ್ರಕಾರ, ತಾಯಿಯ ಅರ್ಜಿಯ ವಿರುದ್ಧ ಹೋರಾಡಲು ಇಬ್ಬರು ಪುತ್ರರು ವಕೀಲರನ್ನು ನೇಮಿಸಿದ್ದರು ಎನ್ನಲಾಗಿದೆ. ಪುತ್ರರ ಪರ ವಕೀಲರು ಇಟಲಿಯಲ್ಲಿ ಪೋಷಕರು ಮಕ್ಕಳನ್ನು ಅಗತ್ಯ ಇರುವವರೆಗೆ ಪೋಷಿಸಬಹುದು ಎಂಬ ಕಾನೂನಿದೆ ಎಂದು ವಾದಿಸಿದ್ದರು ಎನ್ನಲಾಗಿದೆ.
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಈ ಕಾನೂನಿನ ಬಗ್ಗೆಯೂ ಉಲ್ಲೇಖಿಸಿದ ಕ್ಯಾಟರ್ಬಿ, ಪೋಷಕರನ್ನು ಸರಿಯಾಗಿ ನೋಡಿಕೊಂಡಲ್ಲಿ ಮಾತ್ರ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಮಕ್ಕಳಿಗೆ ಇರುತ್ತದೆ ಎಂದು ಹೇಳಿದ್ದಾರೆ.