ಮಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಯುವ ಉದ್ದೇಶದಿಂದ ಗೃಹ ಇಲಾಖೆ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು, ಕಠಿಣ ಕಾನೂನು ಜಾರಿಗೆ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆ, ನಗರ ಶಶಸ್ತ್ರ ದಳದ ಹೊಸ ಕಟ್ಟಡಗಳ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಬರ್ ಅಪರಾಧ ತಡೆಗೆ ಸಮರ್ಪಕ ಕಾನೂನು ಜಾರಿಗೊಳಿಸಲು ಸಮಿತಿ ರಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಗೃಹ ಇಲಾಖೆಯ ತಜ್ಞರು ಸಮಿತಿಯಲ್ಲಿದ್ದು, ಕಾನೂನು ತಿದ್ದುಪಡಿ, ಹೊಸ ನಿಯಮ ಅಳವಡಿಕೆ ಬಗ್ಗೆ ನಿಯಮ ರೂಪಿಸಲಿದ್ದಾರೆ ಎಂದು ಹೇಳಿದ್ದಾರೆ.
ಬ್ಯಾಂಕ್ ಖಾತೆ ವಂಚನೆ, ಹ್ಯಾಕಿಂಗ್, ಸುಳ್ಳು ಸುದ್ದಿ, ವೈಯಕ್ತಿಕ ಖಾತೆಗೆ ಅವಹೇಳನಕಾರಿ ಪೋಸ್ಟ್ ಮೊದಲಾದ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಗೆ ಆಧುನಿಕ ಸ್ಪರ್ಶ ನೀಡುವ ಜೊತೆಗೆ ಅಪರಾಧ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
18000 ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಪಡೆದವರು ಪೊಲೀಸ್ ಇಲಾಖೆ ಸೇರಲು ಬಯಸಿದ್ದಾರೆ. ಪೊಲೀಸ್ ಇಲಾಖೆಯ ಆಧುನೀಕರಣದಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.