
ಸಾಮಾಜಿಕ ಮಾಧ್ಯಮ ದೈತ್ಯ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಸೋಮವಾರ ರಾಜೀನಾಮೆ ನೀಡಿದ ನಂತರ, ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಅವರನ್ನು ಟ್ವಿಟ್ಟರ್‌ನ ಹೊಸ ಸಿಇಒ ಆಗಿ ನೇಮಿಸಲಾಗಿದೆ.
ಐಐಟಿ ಮುಂಬೈ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ 37 ವರ್ಷದ ಅಗರವಾಲ್ ಅವರು ಕಂಪನಿಯ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಲಿದ್ದಾರೆ ಎಂದು ಡೋರ್ಸೆ ಸೋಮವಾರ ಘೋಷಿಸಿದ್ದಾರೆ. ಅವರು ಸಹ-ಸಂಸ್ಥಾಪಕರಾಗಿದ್ದ ಮತ್ತು ಮುಖ್ಯಸ್ಥರಾಗಿದ್ದ ಕಂಪನಿಯಿಂದ 16 ವರ್ಷಗಳ ನಂತರ ಕೆಳಗಿಳಿದಿದ್ದಾರೆ.
ನೂತನ ಸಿಇಒ ಪರಾಗ್ ಅಗರವಾಲ್ ಮೈಕ್ರೋಸಾಫ್ಟ್ ರಿಸರ್ಚ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು ಅಕ್ಟೋಬರ್ 2011 ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಟ್ವಿಟ್ಟರ್‌ಗೆ ಸೇರಿದ್ದರು.
ಪರಾಗ್ ಅಗರವಾಲ್ ನೂತನ ಸಿಇಒ ಆಗಿರುವುದು ಭಾರತೀಯರಿಗೆ ಹೆಮ್ಮೆ ತಂದಿದೆ. ಈಗ ಅವರು ಭಾರತೀಯ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ನೆಟ್ಟಿಗರು ಅಗರವಾಲ್ ಅವರ ಹಳೆಯ ಟ್ವೀಟ್‌ಗಳನ್ನು ಹೊರತೆಗೆಯುತ್ತಿದ್ದಾರೆ. ಟ್ವಿಟ್ಟರ್ ಸಿಇಒ ಆದ ಮೊದಲ ದಿನವೇ ಪರಾಗ್ ಅವರ ಹಳೆಯ ಟ್ವೀಟ್ ವೈರಲ್ ಆಗುತ್ತಿದೆ.
ತಾನು ಈ ಕೆಲಸವನ್ನು ಆನಂದಿಸಬಹುದು ಎಂದು ತೋರುತ್ತಿದೆ ಅಂತಾ ಅಗರ್ವಾಲ್ ಅಕ್ಟೋಬರ್ 4, 2011 ರ ಪೋಸ್ಟ್‌ನಲ್ಲಿ ಟ್ವೀಟ್ ಮಾಡಿದ್ದರು. ಮೇಜಿನ ಮೇಲೆ ಒಂದು ಬಾಟಲ್ ಹಾಗೂ ಪತ್ರ ಇಡಲಾಗಿದ್ದು, ಇದರಲ್ಲಿ ಸ್ವಾಗತ ಪರಾಗ್ ಎಂದು ಬರೆಯಲಾಗಿದೆ. ಈ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದರು.
ಅತ್ಯಂತ ಕಿರಿಯ ಸಿಇಒ ಆಗಿರುವ ಅಗರ್ವಾಲ್, ಒಂದು ದಶಕದ ಹಿಂದೆ ಕೇವಲ 1,000 ಉದ್ಯೋಗಿಗಳಿದ್ದ ಕಂಪನಿಗೆ ಸೇರಿಕೊಂಡಿದ್ದು, ಈವರೆಗೆ ತೋರಿದ ಮಾರ್ಗದರ್ಶನ ಮತ್ತು ಸ್ನೇಹಕ್ಕಾಗಿ ಜಾಕ್ ಡೋರ್ಸೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
— Parag Agrawal (@paraga) October 3, 2011