ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಪಡೆದ ನಂತರ ಯಾವುದೇ ಪ್ಯಾರಾಸಿಟಮಾಲ್ ಹಾಗೂ ನೋವುನಿವಾರಕಗಳನ್ನ ನಾವು ಶಿಫಾರಸ್ಸು ಮಾಡುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
ಲಸಿಕೆ ಪಡೆದ ಮಕ್ಕಳಿಗೆ ಕೆಲವು ರೋಗನಿರೋಧಕ ಕೇಂದ್ರಗಳು 500mgಯ ಮೂರು ಪ್ಯಾರಾಸಿಟಮಾಲ್ ಮಾತ್ರೆಗಳನ್ನ ತೆಗೆದುಕೊಳ್ಳುವ ಸಲಹೆ ನೀಡುತ್ತಿವೆ ಎಂಬ ಮಾಹಿತಿ ಬಂದಿದೆ. ಇತರ ಕೋವಿಡ್ ಲಸಿಕೆಗಳೊಂದಿಗೆ ಪ್ಯಾರಾಸಿಟಮಾಲ್ ಅನ್ನು ಶಿಫಾರಸು ಮಾಡಲಾಗಿದೆ, ಆದರೆ ಕೋವ್ಯಾಕ್ಸಿನ್ ಲಸಿಕೆ ಹಾಕಿದ ನಂತರ ಯಾವುದೇ ಪ್ಯಾರಾಸಿಟಮಾಲ್ ಅಥವಾ ನೋವು ನಿವಾರಕಗಳನ್ನು ನಾವು ಶಿಫಾರಸ್ಸು ಮಾಡುವುದಿಲ್ಲ ಎಂದು ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.
ಕೋವಾಕ್ಸಿನ್ ಪಡೆದುಕೊಂಡ ನಂತರ ಕೆಲವರಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು. ಆದರೆ ಅಡ್ಡಪರಿಣಾಮಗಳು ಕೂಡ ಸೌಮ್ಯವಾಗಿರುತ್ತವೆ ಅದಕ್ಕೆ ಔಷಧಿಗಳ ಅಗತ್ಯವಿಲ್ಲ, ಈ ರೋಗಲಕ್ಷಣಗಳು ಒಂದು ಅಥವಾ ಎರಡು ದಿನಗಳಲ್ಲಿ ಪರಿಹಾರವಾಗತ್ತೆ ಎಂದು ಫಾರ್ಮಾ ಕಂಪನಿ ಹೇಳಿದೆ.
30,000 ವ್ಯಕ್ತಿಗಳ ಮೇಲೆ ನಮ್ಮ ಕ್ಲಿನಿಕಲ್ ಪ್ರಯೋಗಗಳನ್ನ ಮಾಡಲಾಗಿದೆ. ಅದರಲ್ಲಿ ಸುಮಾರು 10-20% ವ್ಯಕ್ತಿಗಳು ಅಡ್ಡಪರಿಣಾಮಗಳನ್ನು ವರದಿ ಮಾಡಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಸೌಮ್ಯವಾಗಿರುತ್ತವೆ, 1-2 ದಿನಗಳಲ್ಲಿ ಪರಿಹಾರವಾಗುತ್ತವೆ, ಇದಕ್ಕೆ ಔಷಧಿಗಳ ಅಗತ್ಯವಿರುವುದಿಲ್ಲ. ಒಂದು ವೇಳೆ ನಿಮ್ಮ ರೋಗಲಕ್ಷಣ ಉಲ್ಬಣಿಸಿದರೆ ವೈದ್ಯರನ್ನು ಸಂಪರ್ಕಿಸಿ, ಅವರು ಶಿಫಾರಸ್ಸು ಮಾಡುವ ಔಷಧಿ ಬಳಸಿ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಭಾರತದಲ್ಲಿ ಈಗ 15-18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗ್ತಿದ್ದು ಮಕ್ಕಳಿಗೆ ಕೋವ್ಯಾಕ್ಸಿನ್ ಉತ್ತಮ ಎಂದು ಈ ಲಸಿಕೆಯನ್ನೆ ನೀಡಲಾಗ್ತಿದೆ.