ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ 670 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಮುಂಜಾನೆ ಭೂಕುಸಿತವು ಸಂಭವಿಸಿದಾಗ ಎಂಗಾ ಪ್ರಾಂತ್ಯವು ಸಂಪೂರ್ಣವಾಗಿ ನಾಶವಾಯಿತು, ಹಲವಾರು ಮನೆಗಳು ಮತ್ತು ಅವುಗಳಲ್ಲಿ ಮಲಗಿದ್ದ ಜನರು ಮಣ್ಣಿನಡಿ ಹೂತು ಹೋಗಿದ್ದಾರೆ. ಈ ಸಮಯದಲ್ಲಿ 670 ಕ್ಕೂ ಹೆಚ್ಚು ಜನರು(ಸದ್ಯ) ಮಣ್ಣಿನಡಿಯಲ್ಲಿದ್ದಾರೆ ಎಂದು ಅವರು ಅಂದಾಜಿಸಿದ್ದಾರೆ ಎಂದು ಯುಎನ್ ವಲಸೆ ಏಜೆನ್ಸಿಯ ಮಿಷನ್ ಮುಖ್ಯಸ್ಥ ಸೆರ್ಹಾನ್ ಅಕ್ಟೋಪ್ರಾಕ್ ತಿಳಿಸಿದ್ದಾರೆ.
ಅಂದಾಜು 150ಕ್ಕೂ ಹೆಚ್ಚು ಮನೆಗಳು ಈಗ ಸಮಾಧಿಯಾಗಿವೆ. ಭಾನುವಾರ ಸಂಜೆಯ ಹೊತ್ತಿಗೆ, ಕೇವಲ ಐದು ಮೃತದೇಹಗಳು ಮತ್ತು ಆರನೇ ಬಲಿಪಶುವಿನ ಕಾಲು ಮಾತ್ರ ಪತ್ತೆಯಾಗಿದೆ. 1,250 ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಹತ್ತಿರದ 250 ಕ್ಕೂ ಹೆಚ್ಚು ಮನೆಗಳನ್ನು ನಿವಾಸಿಗಳು ತ್ಯಜಿಸಿದ್ದಾರೆ, ಅವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.
ಭೂಮಿ ಇನ್ನೂ ಜಾರುತ್ತಿದೆ, ಬಂಡೆಗಳು ಬೀಳುತ್ತಿವೆ, ನಿರಂತರ ಹೆಚ್ಚಿದ ಒತ್ತಡದಿಂದಾಗಿ ನೆಲದ ಮಣ್ಣು ಬಿರುಕು ಬಿಡುತ್ತಿದೆ ಮತ್ತು ಅಂತರ್ಜಲ ಹರಿಯುತ್ತಿದೆ, ಹೀಗಾಗಿ ಈ ಪ್ರದೇಶವು ಎಲ್ಲರಿಗೂ ತೀವ್ರ ಅಪಾಯವನ್ನುಂಟುಮಾಡುತ್ತಿದೆ ಎಂದು ಅಕ್ಟೋಪ್ರಾಕ್ ಹೇಳಿದ್ದಾರೆ.