ಹರಿಯಾಣದ ಪಾಣಿಪತ್‌ನಲ್ಲಿ ವಿವಾಹವೊಂದು ಲೆಹೆಂಗಾ ಮತ್ತು ನಕಲಿ ಆಭರಣಗಳ ವಿವಾದದಿಂದ ರದ್ದಾಗಿದೆ. ಫೆಬ್ರವರಿ 23 ರಂದು ಅಮೃತಸರದಿಂದ ವರನ ಕುಟುಂಬ ಮೆರವಣಿಗೆಯೊಂದಿಗೆ ಆಗಮಿಸಿದಾಗ, ವಧುವಿನ ಕುಟುಂಬ, ವರನ ಕಡೆಯವರು ತಂದ ಲೆಹೆಂಗಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಚಾಂದಿನಿ ಚೌಕ್‌ನಿಂದ 40,000 ರೂ.ಗೆ ಖರೀದಿಸಿದ ಲೆಹೆಂಗಾವನ್ನು ವಧು ಧರಿಸಬೇಕು ಎಂದು ವಧುವಿನ ಕಡೆಯವರು ಪಟ್ಟು ಹಿಡಿದಿದ್ದಾರೆ.
ಈ ಭಿನ್ನಾಭಿಪ್ರಾಯ ತೀವ್ರ ವಾಗ್ವಾದಕ್ಕೆ ತಿರುಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕಾಯಿತು. ವರನ ಸಹೋದರನ ಪ್ರಕಾರ, ಮದುವೆ ಹಾಲ್ ಬುಕ್ಕಿಂಗ್‌ಗೆ 10,000 ರೂ. ನೀಡಲಾಗಿತ್ತು. ಮೊದಲು 20,000 ರೂ. ಮೌಲ್ಯದ ಲೆಹೆಂಗಾ ಬೇಕೆಂದರು. ನಂತರ ದುಬಾರಿ ಲೆಹೆಂಗಾ ಆಯ್ಕೆ ಮಾಡಿದರು. ಹೊಸ ಮನೆ ಕಟ್ಟಲು ಸಾಲ ಮಾಡಿದ್ದೆವು. ಕೈಲಾದ ಲೆಹೆಂಗಾ ತಂದೆವು ಎಂದು ತಿಳಿಸಿದರು. ವಧುವಿನ ಅಜ್ಜಿ ಐದು ಚಿನ್ನದ ಆಭರಣ ಮತ್ತು ಚಾಂದಿನಿ ಚೌಕ್‌ನ ಲೆಹೆಂಗಾ ಕೇಳಿದರು. 35,000 ರೂ. ಖರ್ಚು ಮಾಡಿ ಕಾರು ಬಾಡಿಗೆ ಮಾಡಿ ಬಂದೆವು ಎಂದು ಅವರು ಆರೋಪಿಸಿದ್ದಾರೆ.
ವಧುವಿನ ತಾಯಿ, ವಿಧವೆಯಾಗಿದ್ದು ಕೂಲಿ ಕೆಲಸ ಮಾಡಿ ಕುಟುಂಬ ನಡೆಸುತ್ತಿದ್ದಾರೆ. 2024ರ ಅಕ್ಟೋಬರ್ 25 ರಂದು ಅಮೃತಸರದಲ್ಲಿ ತಮ್ಮ ಕಿರಿಯ ಮಗಳ ಮದುವೆ ನಿಗದಿಪಡಿಸಿದ್ದು, ಎರಡೂ ಹೆಣ್ಣುಮಕ್ಕಳ ಮದುವೆ ಒಂದೇ ಸಮಯದಲ್ಲಿ ಮಾಡಬೇಕೆಂದು ಫೆಬ್ರವರಿ 23 ರಂದು ಹಿರಿಯ ಮಗಳ ಮದುವೆ ನಿಗದಿಪಡಿಸಿದ್ದರು.
ಆದರೆ, ಮದುವೆ ನಿಶ್ಚಯವಾದ ನಂತರ ವರನ ಕಡೆಯವರು ಮದುವೆ ಬೇಗ ಮಾಡುವಂತೆ ಒತ್ತಡ ಹೇರಿದರು. ಮದುವೆಯ ದಿನ ಹಳೆಯ ಲೆಹೆಂಗಾ ಮತ್ತು ನಕಲಿ ಆಭರಣ ತಂದಿರುವುದು ವಧುವಿನ ಕುಟುಂಬಕ್ಕೆ ಆಘಾತವನ್ನುಂಟುಮಾಡಿತು. ಮಾಲೆಗಳನ್ನು ಸಹ ತಂದಿರಲಿಲ್ಲ. ಪ್ರಶ್ನಿಸಿದಾಗ ವರನ ಕಡೆಯವರು ವಾಗ್ವಾದಕ್ಕಿಳಿದಿದ್ದಾರೆ.
ಚಾಂದಿನಿ ಚೌಕ್‌ನಿಂದ ಲೆಹೆಂಗಾಕ್ಕೆ 13,000 ರೂ. ಮುಂಗಡ ಪಾವತಿಸಿದ್ದೆ. ಆದರೆ, 1 ಲಕ್ಷ ರೂ. ಕೇಳಿದ್ದಾರೆಂದು ವರನ ಕಡೆಯವರು ಸುಳ್ಳು ಆರೋಪ ಮಾಡಿದ್ದರು. ಇಂತಹ ಕುಟುಂಬದಲ್ಲಿ ನನ್ನ ಮಗಳ ಭವಿಷ್ಯ ಹೇಗೆ ಸುರಕ್ಷಿತವಾಗಿರುತ್ತದೆ ಎಂದು ವಧುವಿನ ತಾಯಿ ಪ್ರಶ್ನಿಸಿದ್ದಾರೆ. ಮದುವೆ ರದ್ದಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದು, ಪ್ರಕರಣವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.