ಬೆಂಗಳೂರು: ಪ್ರಯಾಣಿಕರ ಸುರಕ್ಷತೆಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್ ಗಳಲ್ಲಿ ಪ್ಯಾನಿಕ್ ಬಟನ್, ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಲಾಗುತ್ತಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಈ ಕ್ರಮಗಳನ್ನು ಅಳವಡಿಸಲಾಗುತ್ತಿದೆ. ಪ್ರಾಯಾಣಿಕರಿಗೆ ಯಾವುದೇ ತೊಂದರೆಯಾದರೆ ಪ್ರಯಾಣಿಕರು ಪ್ಯಾನಿಕ್ ಬಟನ್ ಒಮ್ಮೆ ಒತ್ತಿದರೆ ಕೆ.ಎಸ್.ಆರ್.ಟಿ.ಸಿಯ ಕೇಂದ್ರೀಕೃತ ನಿಯಂತ್ರಣ ಕೊಠಡಿಗೆ ಸಂದೇಶ ರವಾನೆಯಾಗುತ್ತದೆ. ಆಗ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸಿಬ್ಬಂದಿ ಜಿಪಿಎಸ್ ನಿಂದ ಬಸ್ ಸ್ಥಳವನ್ನು ಟ್ರ್ಯಾಕ್ ಮಾಡುತ್ತಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಬಸ್ ನಲ್ಲಿ ಅಧಿಕೃತ ನಿಯಂತ್ರಿತ ಕೊಠಡಿ, ಪ್ಯಾನಿಕ್ ಬಟನ್ ಹಾಗೂ ರಿಯಲ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಇದಕ್ಕಾಗಿ 30.74 ಕೋಟಿ ರೂಪಾಯಿ ವೆಚ್ಚಕ್ಕೆ ಸಂಪುಟ ಸಮ್ಮತಿ ಸೂಚಿಸಿದೆ.
ಕೆ.ಎಸ್.ಆರ್.ಟಿ.ಸಿಯ ಪ್ರೀಮಿಯಂ ಹಾಗೂ ಪ್ರೀಮಿಯಂ ಅಲ್ಲದ ಎಲ್ಲ 8,000 ಬಸ್ ಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಸೌಲಭ್ಯ ಅಳವಡಿಸಲಾಗುತ್ತಿದೆ. ಈ ಯೋಜನೆಗೆ ಮೂರನೇ ಎರಡರಷ್ಟು ವೆಚ್ಚ ಕೇಂದ್ರ ಸರ್ಕಾರ ಹಾಗೂ ಮೂರನೇ ಒಂದರಷ್ಟು ವೆಚ್ಚ ರಾಜ್ಯ ಸರ್ಕಾರ ಬರಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.