ಹೆಣ್ಣು ಮಗು ಹುಟ್ಟಿತ್ತೆಂದು ಅನಾದರದಿಂದ ನೋಡುವುದು ಇನ್ನು ನಿಂತಿಲ್ಲ. ಆದರೆ ಇಲ್ಲೊಬ್ಬ ಪಾನಿಪುರಿ ಮಾರಿ ಜೀವನ ಸಾಗಿಸುವವ ತನಗೆ ಹೆಣ್ಣು ಮಗುವಾಯಿತೆಂದು ಸುಮಾರು ನಲವತ್ತು ಸಾವಿರ ರೂಪಾಯಿ ಖರ್ಚು ಮಾಡಿ ನೂರಾರು ಜನರಿಗೆ ಪಾನಿಪುರಿ ಉಚಿತವಾಗಿ ಹಂಚಿದ್ದಾನೆ.
ಮಧ್ಯಪ್ರದೇಶದ ಭೋಪಾಲಿನ ಕೋಲಾರ ಪ್ರದೇಶದ ಆಂಚಲ್ ಗುಪ್ತ ಪಾನಿಪುರಿ ಮಾರಿಕೊಂಡು ಜೀವನ ನಡೆಸುತ್ತಿದ್ದಾನೆ. ಈತನ ಹೆಂಡತಿಗೆ ಕಳೆದ ತಿಂಗಳು ಹೆಣ್ಣು ಮಗು ಜನಿಸಿದ್ದು, ಈತ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಾನೆ.
ಈತ ತನಗೆ ಹೆಣ್ಣು ಮಗು ಆಯಿತೆಂದು ಬಂದವರಿಗೆಲ್ಲ ಉಚಿತ ಪಾನಿಪುರಿ ಹಂಚಿದ್ದಾನೆ. ಅಷ್ಟೇ ಅಲ್ಲ, ಬಂದವರಿಗೆಲ್ಲ ಹೆಣ್ಣು ಮಕ್ಕಳಿದ್ದರೆ ಮಾತ್ರ ಭವಿಷ್ಯ ಎಂದು ಹೇಳಿಕೊಂಡಿದ್ದಾನೆ. ಈತನಿಗೆ ಎರಡು ವರ್ಷದ ಗಂಡು ಮಗುವಿದ್ದು, ಮದುವೆಯಾದಾಗಿನಿಂದ ಹೆಣ್ಣು ಮಗು ಬೇಕೆಂದು ಬಯಸುತ್ತಿದ್ದು, ಕನಸೀಗ ನನಸಾಗಿದೆ ಎಂದು ಹೇಳಿಕೊಂಡಿದ್ದಾನೆ ಮೂವತ್ತು ವರ್ಷದ ಆಂಚಲ್.
ಪಾನಿಪುರಿ ಪ್ರಿಯರಿಗಾಗಿ ಕಾಂಟ್ಯಾಕ್ಟ್ ಲೆಸ್ ಡೆಲಿವರಿ
ಕೇವಲ ಎಂಟನೇ ತರಗತಿವರೆಗೆ ಓದಿರುವ ಆತ, ಸುಮಾರು ನಲವತ್ತು ಸಾವಿರ ರೂಪಾಯಿಯಷ್ಟು ಪಾನಿಪುರಿ ಉಚಿತವಾಗಿ ಕೊಟ್ಟಿದ್ದಾನೆ. ಆದರೆ ಇಷ್ಟೊಂದು ಖರ್ಚಾಯಿತೆಂದು ಯೋಚಿಸದೆ, ತನಗಾದ ಸಂತೋಷದ ಮುಂದೆ ಇದೇನು ಮಹಾ ಎಂಬಂತೆ ಉಚಿತ ಪಾನಿಪುರಿ ಹಂಚಿದ್ದಾನೆ.
ಮಧ್ಯಾನ್ಹದಿಂದಲೇ ಉಚಿತ ಪಾನಿಪುರಿ ತಿನ್ನಲು ನಿಂತ ಜನಜಂಗುಳಿ ಸಂಜೆವರೆಗೆ ನೂರಾರು ಜನ ಸೇವಿಸಿ ಶುಭ ಹಾರೈಸಿದ್ದಾರೆ. ಕೋವಿಡ್ ಬಗ್ಗೆ ಚಿಂತಿಸದೆ ಸಾಕಷ್ಟು ಜನ ಅಲ್ಲಿ ನೆರೆದಿದ್ದರು. ಈತನ ಹೆಂಡತಿ ಪದವೀಧರೆಯಾಗಿದ್ದು, ಅವಳಿಗೆ ತನ್ನದೇ ಆದ ಹೊಲಿಗೆ ಕೇಂದ್ರ ಪ್ರಾರಂಭಿಸಬೇಕೆಂಬ ಆಸೆಯಿದೆಯಂತೆ. ಅವಳಿಗೆ ತಾನು ಸಹಾಯಮಾಡಲಿದ್ದು, ಆಕೆ ಹಣಕಾಸಿನಲ್ಲಿ ತನ್ನ ಕಾಲಮೇಲೆ ತಾನೇ ನಿಲ್ಲಬೇಕೆಂಬ ಆಸೆ ಎಂದು ಹೇಳಿಕೊಂಡಿದ್ದಾನೆ.
ಏನೇ ಹೇಳಿ ಹೆಣ್ಣುಮಗು ಎಂದು ಮೂಗು ಮುರಿಯುವವರು, ಹೆಂಡತಿಗೇಕೆ ಹಣಕಾಸಿನ ಸ್ವಾತಂತ್ರ್ಯ ಎನ್ನುವವರು ಈತನನ್ನು ನೋಡಿ ಕಲಿಯಬೇಕಿದೆ.