ಈ ಬಾರಿಯ ಗಣೇಶೋತ್ಸವವನ್ನು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಥೀಂನಲ್ಲಿ ಆಚರಿಸಲು ಮುಂದಾದ ಹೈದರಾಬಾದ್‌ನ ಸಮುದಾಯವೊಂದು, ಕೋವಿಡ್-19 ಲಸಿಕೆಯ ಪ್ರತಿಕೃತಿ ಮೇಲೆ ನಿಂತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದೆ.
“ಕಳೆದ 25 ವರ್ಷಗಳಿಂದ ಪ್ರತಿವರ್ಷವೂ ನಾವು ಪರಿಸರ ಸ್ನೇಹಿ ಗಣೇಶ ಮೂರ್ತಿ ಕೂರಿಸುತ್ತಾ ಬಂದಿದ್ದೇವೆ. ಈ ಬಾರಿ, ಗಣೇಶ ಮೂರ್ತಿಯ ಮೂಲಕ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಣೆ ನೀಡುವ ಆಶಯ ಇಟ್ಟುಕೊಂಡಿದ್ದೇವೆ. ಇಲ್ಲಿ ಗಣೇಶ ದೇವರು ಕೈಯಲ್ಲಿ ಎರಡು ಇಲಿಗಳನ್ನು ಹಿಡಿದುಕೊಂಡು ಲಸಿಕೆ ಡಬ್ಬದ ಮೇಲೆ ನಿಂತಿದ್ದಾರೆ.ಲಸಿಕೆ ಪಡೆಯಲು ಕೋ-ವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಈ ಮೂರ್ತಿ ಉತ್ತೇಜನ ನೀಡುತ್ತದೆ,” ಎಂದು ಫ್ಯೂಚರ್ ಫೌಂಡೇಷನ್ ಸಂಘದ ಅಧ್ಯಕ್ಷ ಸಚಿನ್ ಚಂದನ್ ತಿಳಿಸಿದ್ದಾರೆ.
“ಲಸಿಕೆಗಳು ಸುರಕ್ಷಿತವಾಗಿವೆ ಎಂದು ಗಣೇಶ ಮೂರ್ತಿಗಳ ಮೂಲಕ ನಾವು ಸಂದೇಶ ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು,” ಎಂದು ಸಚಿನ್ ತಿಳಿಸಿದ್ದಾರೆ.
ಕೈಲಾಶ ಪರ್ವತದಿಂದ ತನ್ನ ತಾಯಿ ಪಾರ್ವತಿಯೊಂದಿಗೆ ಭೂಮಿಗೆ ಆಗಮಿಸುವ ಗಣೇಶನನ್ನು ಬರಮಾಡಿಕೊಂದು ಸತ್ಕರಿಸಲೆಂದು 10 ದಿನಗಳ ಮಟ್ಟಿಗೆ ದೇಶಾದ್ಯಂತ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ.