ಬೆಂಗಳೂರು : ಪಂಚೆಯುಟ್ಟು ಬಂದ ಎಂಬ ಕಾರಣಕ್ಕೆ ರೈತನಿಗೆ ಅವಮಾನ ಮಾಡಿದ ‘ಜಿಟಿ ಮಾಲ್’ ಮುಂದೆ ಜನರು ‘ಪಂಚೆ’ ಉಟ್ಟು ಪ್ರತಿಭಟನೆ ನಡೆಸಿದ್ದಾರೆ. ಜನರ ಪ್ರತಿಭಟನೆ, ತೀವ್ರ ಆಕ್ರೋಶದ ಬಳಿಕ ಮಾಲ್ ಮಾಲೀಕ ಕ್ಷಮೆಯಾಚಿಸಿದ್ದಾನೆ.
ಹೌದು. ಘಟನೆಯನ್ನು ವಿರೋಧಿಸಿ ಕನ್ನಡ ಸಂಘಟನೆಯ ಕಾರ್ಯಕರ್ತರು ಪಂಚೆಯುಟ್ಟು ಬೆಳಗ್ಗೆ ಮಾಲ್ ಗೆ ಜಮಾಯಿಸಿದ್ದರು. ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಹಾಗೂ ಮತ್ತಿತರರು ಪಂಚೆ ಧರಿಸಿ ಮಾಲ್ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯ ಪ್ರತಿಭಟನೆಯ ಬಳಿಕ ಜಿಟಿ ಮಾಲ್ ಮಾಲೀಕ ಕ್ಷಮೆಯಾಚಿಸಿದ್ದಾರೆ. ಹಾಗೂ ಮಾಲ್ ಆಡಳಿತದ ವರ್ತನೆಯ ಸ್ಪಷ್ಟನೆ ಕೇಳಿ ನೋಟಿಸ್ ಕೊಡಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.
ಏನಿದು ಘಟನೆ
ಬೆಂಗಳೂರಿನ ಮಾಗಡಿ ರೋಡ್ ಟೋಲ್ ಗೇಟ್ ಬಳಿಯಿರುವ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಬಂದಿದ್ದ ಹಾವೇರಿ ಮೂಲದ ರೈತರೊಬ್ಬರಿಗೆ ಪ್ರವೇಶ ನೀಡಲು ಅಲ್ಲಿನ ಸಿಬ್ಬಂದಿ ನಿರಾಕರಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬುವರ ತಂದೆ ಮೂಲತಃ ರೈತರಾಗಿದ್ದು, ಬೆಂಗಳೂರಿಗೆ ಮಗನ ಮನೆ ( ನಾಗರಾಜ್) ಮನೆಗೆ ಬಂದಿದ್ದರು. ಅಂತೆಯೇ ತಂದೆಯನ್ನು ಸಿನಿಮಾ ನೋಡಲು ಮಗ ನಾಗರಾಜ್ ಜಿಟಿ ಮಾಲ್ ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ಉಟ್ಟಿದ್ದಾರೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಾರೆ. ಎಷ್ಟೇ ವಾದ ಮಾಡಿದ್ರೂ ಭದ್ರತಾ ಸಿಬ್ಬಂದಿ ಮಾಲ್ ನ ಒಳಗೆ ಬಿಡಲಿಲ್ಲ. ಇದರಿಂದ ನೊಂದ ನಾಗರಾಜ್ ವಿಡಿಯೋ ಮಾಡಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶಗೊಂಡು ಮಾಲ್ ಗೆ ಮುತ್ತಿಗೆ ಹಾಕಿದ್ದಾರೆ.
ಕಳೆದ ಬಾರಿ ನಮ್ಮ ಮೆಟ್ರೋದಲ್ಲಿ ಕೂಡ ಇಂತಹ ಘಟನೆ ನಡೆದಿತ್ತು, ಇದೀಗ ಮಾಲ್ ನಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.