
ಬೆಂಗಳೂರು: ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ ನಿಯೋಗದೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತಮನಸ್ಸು ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು ನಮ್ಮ ಸರ್ಕಾರದ ನಿಲುವು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವಿದೆ. ಅದರ ಅಂತಿಮ ಶಿಫಾರಸ್ಸು ಇನ್ನೂ ನಮ್ಮ ಕೈಗೆ ತಲುಪಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮೀಸಲಾತಿ ಕುರಿತಾಗಿ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ, ತಜ್ಞರೊಂದಿಗೆ, ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗಲೇ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸಂವಿಧಾನದ ಆಶಯದಂತೆ ಕ್ರಮ. ಯಾವುದೇ ತೀರ್ಮಾನ ಕೈಗೊಳ್ಳುವುದಿದ್ದರೂ, ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಕೈಗೊಳ್ಳಲಾಗುವುದು. ಮೀಸಲಾತಿ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು, ಅದರ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಮಸಾಲಿ ಸಮುದಾಯದ ಮುಖಂಡರು ಭೇಟಿಯಾದಾಗ ನಾನು ಸಲಹೆ ನೀಡಿದ್ದೆ. ಯಾವುದೇ ತೀರ್ಮಾನ ನ್ಯಾಯಯುತವಾಗಿ ಎಲ್ಲರಿಗೂ ಒಪ್ಪಿತವಾಗುವಂತೆ, ನ್ಯಾಯಾಲಯಕ್ಕೂ ಒಪ್ಪಿಗೆಯಾಗುವಂತಿರಬೇಕು ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರ ಸಮುದಾಯದ ಮನವಿ ಮೇರೆಗೆ 2ಸಿ ಮತ್ತು 2ಡಿ ಹೊಸ ಪ್ರವರ್ಗ ಮಾಡಿತು. 3ಎ ನಲ್ಲಿರುವ ಒಕ್ಕಲಿಗರನ್ನು 2ಸಿ ಗೆ ಸೇರಿಸುವುದು. 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಮುಂದಿರಿಸಿತು. ಮುಸ್ಲಿಂಮರ ಮೀಸಲಾತಿಯನ್ನು ತೆಗೆದು ಹಾಕಿತ್ತು. ಮುಸ್ಲಿಂಮರು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದಾಗ, ಯಥಾಸ್ಥಿತಿ ಮುಂದುವರೆಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಆದ್ದರಿಂದ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಪೂರ್ವನಿಗದಿಯಂತೆ ಸಮುದಾಯದ ಮುಖಂಡರೊಂದಿಗೆ ಇಂದು ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯ ಪ್ರಸ್ತುತ ಪ್ರವರ್ಗ-3 ಬಿ ಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕೆಂದು ನಿಯೋಗ ಒತ್ತಾಯಿಸಿದೆ. ಸೂಕ್ತ ಮೀಸಲಾತಿ ಇಲ್ಲದ ಕಾರಣ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಲು ನಿಯೋಗ ಮನವಿ ಮಾಡಿದೆ.