ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದುಂಡುಮೇಜಿನ ಸಭೆ ನಡೆಯಲಿದೆ.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ, ಬೃಹತ್ ಸಮಾವೇಶ ನಡೆಸಲಾಗಿದೆ. ಸತ್ಯಾಗ್ರಹ ಮುಂದುವರಿಸಲಾಗಿದ್ದು, ಈ ನಡುವೆ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಜೊತೆಯಾಗಿದ್ದ ಶ್ರೀ ವಚನಾನಂದ ಸ್ವಾಮೀಜಿ ಧರಣಿಯಿಂದ ದೂರ ಸರಿದಿದ್ದಾರೆ. ಆದರೆ, ಮೀಸಲಾತಿ ವಿಚಾರದಲ್ಲಿ ಹೋರಾಟದಲ್ಲಿ ಒಡಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮ ದಾರಿ ವಿಭಿನ್ನವಾದರೂ ಗುರಿ ಒಂದೇ ಎಂದು ವಚನಾನಂದ ಶ್ರೀ ಸ್ಪಷ್ಟನೆ ನೀಡಿದ್ದು, ಮೀಸಲಾತಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರಾಜಕೀಯ ಹಸ್ತಕ್ಷೇಪದಿಂದ ಹೋರಾಟದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಸತ್ಯಾಗ್ರಹದಲ್ಲಿ ಭಾಗಿಯಾಗುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಮೀಸಲಾತಿ ಹೋರಾಟದಿಂದ ಹಿಂದೆ ಸರಿಯಲ್ಲ. ಜಯಮೃತ್ಯುಂಜಯ ಸ್ವಾಮೀಜಿಗಳೊಂದಿಗೆ ಇರುತ್ತೇನೆ ಎಂದು ತಿಳಿಸಿದ್ದಾರೆ.