ಬೆಳಗಾವಿ: ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣಿದ ಸರ್ಕಾರ ಮೀಸಲಾತಿಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. 2 ಹೊಸ ಕೆಟಗರಿ ರಚನೆ ಮಾಡಲು ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ, ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯಗಳ ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಂಪುಟ ಸಭೆಯ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ. ಹಿಂದುಳಿದ ಆಯೋಗದ ಅಂತಿಮ ವರದಿ ನಂತರ ಯಾರಿಗೆ ಎಷ್ಟು ಮೀಸಲಾತಿ ನೀಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಪಂಚಮಸಾಲಿ, ಲಿಂಗಾಯಿತ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. 2 ಎ ಮೀಸಲಾತಿ ಕೇಳಿದ್ದ ಪಂಚಮಸಾಲಿ ಸಮುದಾಯಕ್ಕೆ 2 ಡಿ ಕೆಟಗರಿ ರಚನೆ ಮಾಡಲಾಗಿದೆ.
2 ಡಿ ಕೆಟಗರಿಯಲ್ಲಿ ಒಟ್ಟಾರೆ ಲಿಂಗಾಯತರಿಗೆ ಮೀಸಲಾತಿ ಫಿಕ್ಸ್ ಆಗಿದೆ. ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯಿತರಿಗೆ 2 ಡಿ ರಚನೆ ಮಾಡಲಾಗಿದೆ. ವೀರಶೈವ ಲಿಂಗಾಯಿತರಿಗೆ ಹೊಸದಾಗಿ 2ಡಿ ಕೆಟಗರಿ ಸೃಷ್ಟಿಸಲಾಗಿದೆ. ಇದುವರೆಗೆ ವೀರಶೈವ ಲಿಂಗಾಯಿತರು 3 ಬಿ ಕೆಟಗರಿಯಲ್ಲಿದ್ದರು.
3 ಎ ನಲ್ಲಿದ್ದ ಒಕ್ಕಲಿಗರಿಗೆ 2 ಸಿ ಕೆಟಗರಿ ರಚನೆ ಮಾಡಲಾಗಿದೆ. 2 ಸಿ ಹಾಗೂ 2 ಡಿ ನಲ್ಲಿ ಮೀಸಲಾತಿ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದ್ದು, 2ಎ ನಲ್ಲಿ ಇರುವ 102 ಪಂಗಡಗಳ ಮೀಸಲಾತಿ ಟಚ್ ಮಾಡದಿರಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಬದಲಿಗೆ 2 ಸಿ ಮತ್ತು 2 ಡಿ ಕೆಟಗರಿ ರಚನೆ ಮಾಡಲಾಗುವುದು ಎಂದು ಹೇಳಲಾಗಿದೆ.