ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಟ್ರ್ಯಾಕ್ಟರ್ ರ್ಯಾಲಿಗೆ ನಿರ್ಬಂಧ ವಿಧಿಸಿದ್ದರು. ಇದರಿಂದ ಜಯಮೃತ್ಯುಂಜಯ ಸ್ವಾಮಿಜಿ ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಎಂದು ಕಿಡಿಕಾರಿದ್ದರು. ಅತ್ತ ವಿಧಾನಸಭೆಯಲ್ಲಿ ಕಲಾಪದ ವೇಳೆ ಬಿಜೆಪಿ ಸದದ್ಯರು ಜಿಲ್ಲಾಡಳಿತ ಕ್ರಮ ಖಂಡಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಸ್ವಾಮೀಜಿ ನಾಳೆ ರ್ಯಾಲಿಗೆ ಅನುಮತಿ ನೀಡುವಂತೆ ಕೋರಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಕಮಿಷ್ನರ್ ಯಡಾ ಮಾರ್ಟಿನ್, ಶಾಂತಿಯುತ ಪ್ರತಿಭಟನೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಯಾವುದೇ ಟ್ರ್ಯಾಕ್ಟರ್ ರ್ಯಾಲಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರಿಗೆ ಸುವರ್ಣಸೌಧದ ಬಳಿ ಸ್ಥಳವನ್ನು ನಿಗದಿಪಡಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಜಿಲ್ಲಾಧಿಕಾರಿಗಳು, ಕಮಿಷ್ನರ್ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡಬೇಕು. ಯಾವುದೇ ಭಾವೊದ್ವೇಗಕ್ಕೆ ಒಳಗಾಗುವಂತಿಲ್ಲ ಎಂದು ಹೇಳಿದ್ದಾರೆ. ನಾಳೆ ಪ್ರತಿಭಟನೆ ಸಮಾವೇಶ ನಡೆಸುತ್ತೇವೆ. ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಮುಖ್ಯಮಂತ್ರಿಗಳ ಆದೇಶಕ್ಕಾಗಿ ಕಾಯುತ್ತೇವೆ ಎಂದು ಹೇಳಿದರು.