ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರ ಹೋರಾಟ ಮತ್ತೆ ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ.
ಪಂಚಮಸಾಲಿ ಹೊರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಹಾಗೂ ಪಂಚಮಸಾಲಿಗಳ ಹೋರಾಟ ಸಂವಿಧಾನ ವಿರೋಧಿ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿಂಪಡೆಯುವಂತೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿ ಡಿಸಿ ಕಚೇರಿ ಬಳಿ ಪಂಚಮಸಾಲಿ ಮುಖಂಡರು ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಧರಣಿಗೆ ಅವಕಾಶ ನೀಡಿಲ್ಲ. ಇದರಿಂದ ಪಂಚಮಸಾಲಿ ಹೋರಾಟಗಾರರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಹೋರಾಟ ತಡೆಯುವುದು ಅವರ ಹವ್ಯಾಸ, ಆದರೆ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಸಿಎಂ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಲಾಠಿ ಚಾರ್ಜ್ ಮಾಡಿರುವ ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.