
ಬೆಂಗಳೂರು: ಪಲ್ಲಕ್ಕಿ ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೊಲ್ಲಹಳ್ಳಿ ಬಳಿ ನಡೆದಿದೆ.
ವೀರಸಂದ್ರ ನಿವಾಸಿ ರಂಗನಾಥ (33), ಹರಿಬಾಬು (25) ಮೃತರು. ಗೊಲ್ಲಹಳ್ಳಿ ಗ್ರಾಮದ ಜಾತ್ರೆಯ ಪಲ್ಲಕ್ಕಿ ಉತ್ಸವ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಪಲ್ಲಕ್ಕಿ ಉತ್ಸವ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಟ್ರ್ಯಾಕ್ಟರ್ ನಲ್ಲಿದ್ದ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಟ್ರ್ಯಾಕ್ಟರ್ ಚಾಲಕನನ್ನು ರಕ್ಷಿಸಲು ಧಾವಿಸಿದ್ದ ವ್ಯಕ್ತಿಗೂ ವಿದ್ಯುತ್ ಶಾಕ್ ಹೊಡೆದಿದೆ. ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಇಬ್ಬರೂ ಸಾವನ್ನಪ್ಪಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.