ದೇಶದ ಹೊರಗಿರುವ ಶಕ್ತಿಗಳಿಂದ ತಮ್ಮ ಜೀವಕ್ಕೆ ಕುತ್ತಿದೆ ಎಂದು ಪಾಕಿಸ್ತಾನ ಸರ್ಕಾರದ ಹೇಳಿಕೆಯನ್ನು ಅಲ್ಲಗಳೆದಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ತಮ್ಮದೇ ದೇಶದ ಆರು ಮಂದಿ ತಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದಿದ್ದಾರೆ.
ಹೊಸ ವಿಡಿಯೋವೊಂದರಲ್ಲಿ ಮಾತನಾಡಿರುವ ಖಾನ್, ತಮ್ಮನ್ನು ಕೊಲ್ಲಲು ಉದ್ದೇಶಿಸಿರುವ ಮಂದಿಯ ಹೆಸರುಗಳು ಒಂದು ವೇಳೆ ತಮ್ಮ ಕೊಲೆಯಾದಲ್ಲಿ ಸಾರ್ವಜನಿಕವಾಗಿ ಹೊರ ಬರಲಿವೆ ಎಂದಿದ್ದಾರೆ.
“ಈ ಆರರಲ್ಲಿ, ಮೂವರ ಹೆಸರುಗಳನ್ನು ನನ್ನ ಕೊಲೆ ಮಾಡಲು ಪಂಜಾಬ್‌ನಲ್ಲಿ ಕಳೆದ ನವೆಂಬರ್‌ನಲ್ಲಿ ನಡೆಸಿದ ವಿಫಲ ಯತ್ನದ ಬಳಿಕ ಎಫ್‌ಐಆರ್‌ನಲ್ಲಿ ಹೆಸರಿಸಿದ್ದೇನೆ,” ಎಂದು ಗುರುವಾರ ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ ಇಮ್ರಾನ್.
ಲಾಹೋರ್‌ನಿಂದ 150ಕಿಮೀ ದೂರದಲ್ಲಿರುವ ವಜ಼ೀರಾಬಾದ್ ಪ್ರದೇಶದಲ್ಲಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಮಾಜಿ ಪ್ರಧಾನಿಯ ಕಾಲಿಗೆ ಗಾಯವಾಗಿತ್ತು. ತಮ್ಮನ್ನು ಕೊಲ್ಲಲು ಪ್ರಧಾನಿ ಶಹಬಾಜ಼್ ಶರೀಫ್, ಒಳಾಡಳಿತ ಸಚಿವ ರಾಣಾ ಸನಾಉಲ್ಲಾ ಹಾಗೂ ಐಎಸ್‌ಐ ಅಗ್ರಾಧಿಕಾರಿ ಮೇಜರ್ ಜನರಲ್ ಫೈಸಲ್ ನಸೀರ್ ಸಂಚು ರೂಪಿಸಿದ್ದಾಗಿ ಇಮ್ರಾನ್ ತಿಳಿಸಿದ್ದರು.