1947 ರಲ್ಲಿ ಭಾರತ- ಪಾಕಿಸ್ತಾನ ಪ್ರತ್ಯೇಕವಾದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಸಹೋದರನನ್ನು ಹುಡುಕುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರ ಕತೆ ಇದು.
ಈ ಮಹಿಳೆ ಶರೀಫಾ ಬೀಬಿ. ಅವರು ಹೇಳುವ ಪ್ರಕಾರ ಸಹೋದರ ಭಾರತದಲ್ಲಿದ್ದಾರಂತೆ. 1947 ರಲ್ಲಿ ಭಾರತದ ಹಿಂದೂ ಕುಟುಂಬವೊಂದು ಹುಡುಗನೊಬ್ಬನನ್ನು ದತ್ತು ಪಡೆದಿದ್ದು, ಈ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ ಮತ್ತು ತನ್ನ ಮೂಲ ಕುಟುಂಬವನ್ನು ಕಾಣಲೆಂದು ಆತ 1990 ರಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಮಾಡಿದ್ದರ ಬಗ್ಗೆ ಮಾಹಿತಿ ದೊರೆತಿದೆ. ಆದರೆ, ಆತನೇ ಶರೀಫಾ ಬೀಬಿ ಸಹೋದರ ಎಂಬುದು ಇನ್ನೂ ಜಿಜ್ಞಾಸೆಯಾಗಿದ್ದು, ಬೀಬಿ ಮಾತ್ರ ಸಹೋದರನ ಹುಡುಕಾಟವನ್ನು ಮುಂದುವರಿಸಿದ್ದಾರೆ.
ಈ ಶರೀಫಾ ಬೀಬಿ ಕತೆಯನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಶರೀಫಾ ಬೀಬಿ ಅವರು ಪಾಕಿಸ್ತಾನದ ಬುರೆವಾಲದಲ್ಲಿ ವಾಸಿಸುತ್ತಿದ್ದಾರೆ. 1947 ರಲ್ಲಿ ಪ್ರತ್ಯೇಕತೆ ಕೂಗು ಹೆಚ್ಚಾಗಿದ್ದ ಸಂದರ್ಭದಲ್ಲಿ ತನ್ನ ಸಹೋದರ ಮೊಹ್ಮದ್ ತುಫೈಲ್ ನನ್ನು ರೈಲು ನಿಲ್ದಾಣದಲ್ಲಿ ಮಲಗಿದ್ದ ವೇಳೆ ಕಳೆದುಕೊಂಡಿದ್ದರು. ಆಗ ಆತನಿಗೆ 7 ವರ್ಷ ವಯಸ್ಸಾಗಿತ್ತು. ಬೀಬಿ, ಸಹೋದರನ ಪತ್ತೆಗೆ ನೆರವಾಗುವಂತೆ ಪಾಕಿಸ್ತಾನಿ ಪತ್ರಕರ್ತರ ಹಾಗೂ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಸಂದರ್ಭದಲ್ಲಿ ಮೊಹ್ಮದ್ ತುಫೈಲ್ ಪೋಷಕರು ಪಾಕಿಸ್ತಾನದಲ್ಲಿ ಉಳಿದುಕೊಂಡರೆ, 7 ವರ್ಷದ ತುಫೈಲ್ ನನ್ನು ಶ್ರೀಮಂತ ಹಿಂದೂ ಕುಟುಂಬವೊಂದು ದತ್ತು ಪಡೆದುಕೊಂಡು ಭಾರತದ ದೆಹಲಿಗೆ ಕರೆ ತಂದಿತ್ತು ಎನ್ನಲಾಗಿದೆ.
ವಿಶೇಷವೆಂದರೆ ಮೊಹ್ಮದ್ ತುಫೈಲ್ ನ ಹೆಸರನ್ನು ಆ ಕುಟುಂಬ ಅರ್ಜುನ್ ಅಥವಾ ರಂಜಿತ್ ಎಂದು ಮರು ನಾಮಕರಣ ಮಾಡಿತ್ತು. ಬಹುಶಃ ಕುಟುಂಬದ ಉಪನಾಮ ಸಿಂಗ್ ಎಂದಿರಬಹುದು ಎಂದು ಭಾವಿಸಲಾಗಿದೆ. ಈ ಕುಟುಂಬ ಇಂದಿರಾಗಾಂಧಿಯವರ ಮನೆಯ ಸಮೀಪದಲ್ಲಿನ ಬಂಗಲೆಯಲ್ಲಿ ವಾಸವಾಗಿತ್ತು. ಬಾಲಕ ಕುದುರೆಗಳ ಬಗ್ಗೆ ಪ್ರೀತಿ ಹೊಂದಿದ್ದು, ಕಾಲಕ್ರಮೇಣ ಆತ ದೆಹಲಿ ರೇಸ್ ಕ್ಲಬ್ ನ ಹಿರಿಯ ಸದಸ್ಯರಾಗಿದ್ದಾರೆ ಎಂದು ಹೇಳಲಾಗಿದೆ. ತದ ನಂತರ ಆತ ಚಾಂದಿನಿ ಚೌಕ್ ನಲ್ಲಿ ವಾಸವಾಗಿದ್ದ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಅಲ್ಲದೇ, 1990 ರಲ್ಲಿ ಪಾಕಿಸ್ತಾನಕ್ಕೆ ತನ್ನ ಸಹೋದರಿಯರನ್ನು ಭೇಟಿ ಮಾಡಲು ಹೋದನಾದರೂ, ಅಲ್ಲಿ ಅವರು ಸಿಗದೇ ಬರಿಗೈಲಿ ವಾಪಸ್ ಬಂದಿದ್ದರು.