ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯಾವಳಿಯ ಮೂಲಕ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಕ್ರೇಜ್ ಶುರುವಾಗಿದೆ. ವಿಶ್ವಕಪ್ ಪಂದ್ಯಾವಳಿ ವೇಳೆ ಅಭಿಮಾನಿಗಳು ಮತ್ತು ಆಯಾ ದೇಶಗಳು ಗೀತೆಗಳ ಮೂಲಕ ಆಟಗಾರರನ್ನು ಹುರಿದುಂಬಿಸುತ್ತಾ ತಮ್ಮ ಕ್ರೀಡಾ ಪ್ರೇಮ ಮೆರೆಯುತ್ತಾರೆ . ಇಂಥದ್ದೊಂದು ಪ್ರಯತ್ನದಲ್ಲಿ ಪಾಕಿಸ್ತಾನದಲ್ಲಿ ಸ್ವಯಂಘೋಷಿತ ಗಾಯಕರೊಬ್ಬರು ಹಾಡೊಂದನ್ನ ರಚಿಸಿದ್ದು ಅದು ಮೆಚ್ಚುಗೆಗಿಂತ ಭಾರೀ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲದೇ ಗಾಯಕ ನಗೆಪಾಟಲಿಗೀಡಾಗಿದ್ದಾರೆ.
ಪಾಕಿಸ್ತಾನಿ ಸ್ವಯಂ ಘೋಷಿತ ಗಾಯಕ ಚಾಹತ್ ಫತೇಹ್ ಅಲಿ ಖಾನ್ ಹಾಡೊಂದನ್ನ ಬಿಡುಗಡೆ ಮಾಡಿದ್ದಾರೆ. 2 ನಿಮಿಷಗಳ ಹಾಡಿನಲ್ಲಿ ‘ಜೀತೇಂಗೆ ಭಾಯ್ ಜೀತೇಂಗೆ’ ಎಂಬ ಸಾಲನ್ನು ಹೊರತುಪಡಿಸಿ ಬೇರೇ ಸಾಹಿತ್ಯವೇ ಇಲ್ಲದ ಈ ಹಾಡು ನೆಟ್ಟಿಗರು ನಗುವಂತೆ ಮಾಡಿದೆ. ಗಾಯಕನ ಪೋಸ್ಟ್ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಈ ಹಾಡನ್ನು ಸ್ವಯಂ ಘೋಷಿತ ಗಾಯಕ ಚಾಹತ್ ಫತೇಹ್ ಅಲಿ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಅಸ್ಲಾಮ್ ಒ ಅಲಿಕುಮ್ ಜಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಹಾಡು ಮಾಶಾ ಅಲ್ಲಾಹ್” ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿದೆ. ಗಾಯಕನ ನೃತ್ಯದೊಂದಿಗೆ ಈ ಹಾಡು ಕೇಳಿದವರು ದಯವಿಟ್ಟು ನೀವು ಹಾಡಬೇಡಿ. ಇನ್ಮುಂದೆ ಹಾಡುವುದನ್ನ ನಿಲ್ಲಿಸಿ ಎಂದು ಕಾಲೆಳೆದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ 13 ನೇ ಆವೃತ್ತಿಯ ವಿಶ್ವಕಪ್ ಆಗಿದ್ದು, ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡಿದೆ. ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಅಕ್ಟೋಬರ್ 05 ರಿಂದ ಆರಂಭವಾಗಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನವೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ. ಈ ವರ್ಷದ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತವು ಆಯೋಜಿಸುತ್ತಿದೆ ಮತ್ತು 48 ಪಂದ್ಯಗಳನ್ನು ಆಡಲು ನಿಗದಿಪಡಿಸಲಾಗಿದೆ.