ಇಸ್ಲಾಮಾಬಾದ್: ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರವಾದ ಕರ್ತಾರ್‌ಪುರ ಗುರುದ್ವಾರ ದರ್ಬಾರ್ ಸಾಹಿಬ್ ನಲ್ಲಿ ಪಾಕಿಸ್ತಾನದ ಯುವತಿಯೊಬ್ಬಳು ಫೋಟೋಶೂಟ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಗುರುದ್ವಾರ ದರ್ಬಾರ್ ಸಾಹಿಬ್(ಕರ್ತಾರ್‍ಪುರ್ ಸಾಹಿಬ್) ಆವರಣದಲ್ಲಿ ಪಾಕಿಸ್ತಾನಿ ಮಾಡೆಲ್ ಭಾರತೀಯ ಉಡುಪನ್ನು ಧರಿಸಿ, ಬುರ್ಖಾ ಧರಿಸದೆ ಫೋಟೋಗೆ ಪೋಸ್ ನೀಡಿದ್ದಾಳೆ. ಈ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು ಭಾರಿ ವಿರೋಧ ವ್ಯಕ್ತವಾಗಿದೆ. ಮಾಡೆಲ್ ಮೇಲೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಮೂಲಗಳ ಪ್ರಕಾರ, ಯುವತಿಯು ಲಾಹೋರ್ ಮೂಲದವಳಾಗಿದ್ದು, ಪಾಕಿಸ್ತಾನದಲ್ಲಿ ಸಿದ್ಧ ಉಡುಪುಗಳ ಮಹಿಳಾ ಆನ್‌ಲೈನ್ ಬಟ್ಟೆ ಬ್ರ್ಯಾಂಡ್ ನ ಪ್ರಚಾರಕ್ಕಾಗಿ ಮಾಡೆಲ್ ಗಳ ಫೋಟೋಶೂಟ್ ಮಾಡಲಾಯ್ತು. ಅದರಲ್ಲಿ ಕರ್ತಾರ್‌ಪುರ ಸಾಹಿಬ್ ನಲ್ಲಿ ಫೋಟೋಶೂಟ್ ಮಾಡಲಾಗಿದ್ದು, ಇಲ್ಲಿ ಮಾಡೆಲ್ ಬುರ್ಖಾ ಧರಿಸಿಲ್ಲ, ಅಲ್ಲದೆ ತಲೆಗೆ ಬಟ್ಟೆಯನ್ನೂ ಹಾಕದೆ ಫೋಟೋಶೂಟ್ ಮಾಡಿದ್ದಾಳೆ. ಇದು ನೆಟ್ಟಿಗರನ್ನು ಕೆರಳಿಸಿದೆ.
ಆನ್‌ಲೈನ್ ಸ್ಟೋರ್‌ನ ಮಾಲೀಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಡೆಲ್ ನ ವಿವಿಧ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಆನ್ಲೈನ್ ನಲ್ಲಿ ಕಿಡಿ ಹೊತ್ತಿಸಿದೆ. ಹೆಚ್ಚಿನ ಎಲ್ಲಾ ಬಳಕೆದಾರರು ಇದನ್ನು ವಿರೋಧಿಸಿದ್ದಾರೆ. ಪವಿತ್ರ ಧಾರ್ಮಿಕ ಕೇಂದ್ರ ಗುರುದ್ವಾರದಲ್ಲಿ ಈ ರೀತಿ ಫೋಟೋಶೂಟ್ ನಡೆಸಿದ್ದಕ್ಕೆ ನೆಟ್ಟಿಗರು ಕೆರಳಿ ಕೆಂಡವಾಗಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಮಾಡೆಲ್ ಘಾಸಿಗೊಳಿಸಿದ್ದು, ಗೌರವಾನ್ವಿತವಾಗಿ ನಡೆದುಕೊಂಡಿಲ್ಲ ಅಂತಾ ಕೆಲವು ಬಳಕೆದಾರರು ಟೀಕಿಸಿದ್ದಾರೆ. ಇನ್ನೂ ಕೆಲವರು ಇದೊಂದು ನಾಚಿಕೆಗೇಡು, ಇದೇನು ಪಿಕ್ನಿಕ್ ಸ್ಪಾಟ್ ಅಲ್ಲ. ತಲೆಗೆ ಯಾಕೆ ಬಟ್ಟೆ ಹಾಕಿಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಶೀಘ್ರವೇ ಪೋಸ್ಟ್ ಅನ್ನು ಅಳಿಸುವಂತೆ ಕೇಳಿಕೊಂಡಿದ್ದಾರೆ.