ಸಾಮಾಜಿಕ ಜಾಲತಾಣದಲ್ಲಿ ತನಗೆ ಪರಿಚಯವಾಗಿದ್ದ ಯುವಕನನ್ನು ಪ್ರೀತಿಸುತ್ತಿದ್ದ ಪಾಕಿಸ್ತಾನದ ಯುವತಿ ಆತನೊಂದಿಗೆ ಮದುವೆಯಾಗಲು ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದಳು. ಬಳಿಕ ತಾನು ಮೆಚ್ಚಿದ ಯುವಕನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ಸಂಸಾರವನ್ನೂ ನಡೆಸುತ್ತಿದ್ದಳು.
ಉತ್ತರಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದ ಯುವತಿ ಇಕ್ರಾ ಜೀವನಿ ಬಳಿ ತನ್ನ ಹೆಸರನ್ನು ಸಮೀರ್ ಅನ್ಸಾರಿ ಎಂದು ಹೇಳಿಕೊಂಡಿದ್ದಲ್ಲದೆ ತಾನು ಸಾಫ್ಟ್ ವೇರ್ ಇಂಜಿನಿಯರ್ ಎಂದು ಹೇಳಿದ್ದ ಎನ್ನಲಾಗಿದೆ.
ಪಾಕಿಸ್ತಾನದ ಯುವತಿ ಯಾವುದೇ ದಾಖಲೆಗಳಿಲ್ಲದೆ ಬೆಂಗಳೂರಿಗೆ ಬಂದಿರುವ ವಿಷಯ ಪೊಲೀಸರಿಗೆ ಅರಿವಾದ ಬಳಿಕ ಆಕೆಯನ್ನು ವಶಕ್ಕೆ ಪಡೆದು ಈಗ ವಾಪಸ್ ಕಳುಹಿಸಿಕೊಡಲಾಗಿದೆ. ಭಾನುವಾರದಂದು ಗಡಿಯಲ್ಲಿ ಪಾಕಿಸ್ತಾನ ಸೇನೆಯ ವಶಕ್ಕೆ ನೀಡಲಾಗಿದ್ದು, ಈ ಸಂದರ್ಭದಲ್ಲಿ ಆಕೆಯ ತಂದೆ, ತಾಯಿ ಮತ್ತು ಚಿಕ್ಕಪ್ಪ ಲಾಹೋರ್ ನಿಂದ ಕರೆದುಕೊಂಡು ಹೋಗಿದ್ದಾರೆ. ಭಾರತಕ್ಕೆ ಬರಲು ಇಕ್ರಾ, ತನ್ನ ಬಳಿ ಇದ್ದ ಚಿನ್ನವನ್ನು ಮಾರಾಟ ಮಾಡಿದ್ದಲ್ಲದೆ ಸ್ನೇಹಿತರ ಬಳಿಯೂ ಸಾಲ ಮಾಡಿಕೊಂಡಿದ್ದಳು ಎಂದು ಹೇಳಲಾಗಿದೆ.