ಗುಜರಾತ್ ಎಟಿಎಸ್ ನೀಡಿದ ಸುಳಿವಿನ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) 300 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು 40 ಕೆಜಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ 10 ಜನರಿದ್ದ ಪಾಕಿಸ್ತಾನದ ದೋಣಿಯನ್ನು ಭಾರತೀಯ ಸಮುದ್ರದಲ್ಲಿ ವಶಕ್ಕೆ ಪಡೆದುಕೊಂಡಿದೆ.
ನಂತರ ಹೆಚ್ಚಿನ ತನಿಖೆಗಾಗಿ ಮೀನುಗಾರಿಕಾ ದೋಣಿ ಅಲ್ ಸೊಹೆಲಿಯನ್ನು ಓಖಾಗೆ ತರಲಾಯಿತು ಎಂದು ಐಸಿಜಿ ಹೇಳಿಕೆಯಲ್ಲಿ ತಿಳಿಸಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಡಿಸೆಂಬರ್ 25-26 ರ ರಾತ್ರಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದು ಈ ವರ್ಷ ಐಜಿಸಿ ಮತ್ತು ರಾಜ್ಯ ಎಟಿಎಸ್‌ನ ಏಳನೇ ಜಂಟಿ ಕಾರ್ಯಾಚರಣೆಯಾಗಿದೆ. ಮೂರು ತಿಂಗಳಲ್ಲಿ ಮೂರನೇ ಕಾರ್ಯಾಚರಣೆಯಾಗಿದೆ.
ಎರಡು ತಿಂಗಳ ಹಿಂದೆ ಇದೇ ರೀತಿಯ ಕಾರ್ಯಾಚರಣೆಯಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 350 ಕೋಟಿ ರೂಪಾಯಿ ಮೌಲ್ಯದ 50 ಕೆಜಿ ಹೆರಾಯಿನ್ ಅನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಬೋಟ್ ‘ಅಲ್ ಸಕರ್’ ಅನ್ನು ವಶಪಡಿಸಿಕೊಂಡಿತ್ತು. ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ ಆರು ಸಿಬ್ಬಂದಿಯನ್ನು ಬಂಧಿಸಿತ್ತು.
ಪಾಕಿಸ್ತಾನ ಮೂಲದ ಪ್ರಮುಖ ಡ್ರಗ್ ಬ್ಯಾರನ್ ಮೊಹಮ್ಮದ್ ಕಾದರ್ ಡ್ರಗ್ಸ್ ಸಾಗಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಹೇಳಿದ್ದಾರೆ.