ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ಕುರ್ರಾಮ್ ನಲ್ಲಿ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕರು ಪಾಕಿಸ್ತಾನ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಕ್ಯಾಪ್ಟನ್ ಸೇರಿದಂತೆ 12 ರಿಂದ 15 ಸೈನಿಕರು ಮೃತಪಟ್ಟಿದ್ದಾರೆ. ಅನೇಕ ಸೈನಿಕರು ಗಾಯಗೊಂಡಿದ್ದು, 63 ಪಾಕ್ ಸೈನಿಕರನ್ನು ತಾಲಿಬಾನ್ ಭಯೋತ್ಪಾದಕರು ಅಪಹರಿಸಿದ್ದಾರೆ.
ನಿಷೇಧಿತ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕರ ಗುಂಪಿನ ವಿರುದ್ಧ ಪಾಕಿಸ್ತಾನ ಸೈನಿಕರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ದೊಡ್ಡ ನಷ್ಟ ಅನುಭವಿಸಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ 28 ಬಲೂಚ್ ರೆಜಿಮೆಂಟ್‌ನ ಕ್ಯಾಪ್ಟನ್ ಅಬ್ದುಲ್ ಬಸಿತ್ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಸೈನಿಕರು ಕೊಲ್ಲಲ್ಪಟ್ಟರು. ಬಸಿತ್ ಪಾಕ್ ಫ್ರಾಂಟಿಯರ್ ಕಾರ್ಪ್ಸ್ ವಿಂಗ್‌ನ ಥಾಲ್ ಸ್ಕೌಟ್ಸ್ ಗೆ ಡೆಪ್ಯುಟೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪಾಕಿಸ್ತಾನದ ಉತ್ತರ ಖೈಬರ್ ಪಖ್ತುನ್ಖ್ವಾ ಅಥವಾ ಕೆಪಿಕೆ ಪ್ರಾಂತ್ಯದಲ್ಲಿ ಕುರ್ರಾಮ್ ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಸೇನೆಯ 63 ಸೈನಿಕರನ್ನು ಅಪಹರಿಸಲಾಗಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರೂ ಸಾವನ್ನಪ್ಪಿದ್ದಾರೆ. ಸೇನೆಯಿಂದ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ತಾಲಿಬಾನ್
ಇತ್ತೀಚೆಗೆ, ಪಾಕಿಸ್ತಾನಕ್ಕೆ ತಾಲಿಬಾನ್ ನಿಂದ ದೊಡ್ಡ ಎಚ್ಚರಿಕೆ ನೀಡಲಾಗಿದೆ. ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, ಅಫ್ಘಾನಿಸ್ತಾನದಲ್ಲಿ ಮಾತುಕತೆ ಇತ್ಯರ್ಥಕ್ಕೆ ತಾಲಿಬಾನ್ ಗೆ ಸಹಾಯ ಮಾಡಲು ಪಾಕಿಸ್ತಾನವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಇಸ್ಲಾಮಾಬಾದ್ ನಮಗೆ ಸೂಚನೆ ನೀಡಲು ಅಥವಾ ಅದರ ಅಭಿಪ್ರಾಯಗಳನ್ನು ನಮ್ಮ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಜಿಯೋ ನ್ಯೂಸ್‌ನ ‘ಜಿಗ್ರಾ’ ಕಾರ್ಯಕ್ರಮದಲ್ಲಿ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮವನ್ನು ಭಾನುವಾರ ತಡರಾತ್ರಿ ಪ್ರಸಾರ ಮಾಡಲಾಗಿದೆ.
ತಾಲಿಬಾನ್ ವಕ್ತಾರ ಸುಹೇಲ್, ನಾವು ಯಾವುದೇ ವ್ಯಕ್ತಿ ಅಥವಾ ಯಾವುದೇ ಗುಂಪನ್ನು ಅಫ್ಘಾನಿಸ್ತಾನದ ಮಣ್ಣನ್ನು ಬಳಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದು, ನಾನು ಇದನ್ನು ಅನೇಕ ಸಂದರ್ಶನಗಳಲ್ಲಿ ಹೇಳಿದ್ದೇನೆ. ಈ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ವಿಶೇಷವೆಂದರೆ, ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಂಡಾಗಿನಿಂದ, ತಾಲಿಬಾನ್ ಹೆಚ್ಚು ಸಕ್ರಿಯವಾಗಿದೆ. ದೇಶದ ಹೆಚ್ಚಿನ ಭಾಗಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದೆ. ಅಫ್ಘಾನಿಸ್ತಾನದ 85 ಪ್ರತಿಶತವನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಈ ಬೆಳವಣಿಗೆಗಳ ನಡುವೆ ಪಾಕಿಸ್ತಾನ ಅಫ್ಘಾನಿಸ್ತಾನದ ಗಡಿಯನ್ನು ಸುತ್ತುವರಿದು ಕಣ್ಗಾವಲು ಹೆಚ್ಚಿಸಲಾಗಿದೆ.