
ನ್ಯೂಯಾರ್ಕ್: ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುತ್ತದೆ. ಆದರೆ ಪಾಕ್ ಪ್ರಧಾನಿ ಲಾಡೆನ್ ನಂತಹ ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುತ್ತಾರೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಟೀಕಿಸಿದೆ.
ವಿಶ್ವಸಂಸ್ಥೆಯ ತತ್ವಗಳನ್ನು ಪರಿಗಣಿಸದೆ, ತನ್ನ ನೆರೆಹೊರೆಯವರ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪದೇ ಪದೇ ತೊಡಗಿದೆ ಎಂದು ಭಾರತವು ಪಾಕಿಸ್ತಾನದ ಮೇಲೆ ತೀವ್ರವಾಗಿ ಆಕ್ಷೇಪಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನದಲ್ಲಿ ಸೋಮವಾರ ಮೊದಲ ಸಮಿತಿಯ ಸಾಮಾನ್ಯ ಚರ್ಚೆಯಲ್ಲಿ ಉತ್ತರಿಸುವ ಹಕ್ಕಿನಡಿ ವಿಶ್ವಸಂಸ್ಥೆಯ ಭಾರತದ ಖಾಯಂ ಕಾರ್ಯಾಚರಣೆಯ ಸಲಹೆಗಾರ ಎ. ಅಮರನಾಥ್, ಪಾಕಿಸ್ತಾನದ ಖಾಯಂ ಪ್ರತಿನಿಧಿ ಇಲ್ಲಿ ಶಾಂತಿ, ಭದ್ರತೆ ಬಗ್ಗೆ ಮಾತನಾಡುತ್ತಾರೆ. ಅಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಸಾಮಾ ಬಿನ್ ಲಾಡೆನ್ ನಂತಹ ಜಾಗತಿಕ ಭಯೋತ್ಪಾದಕರನ್ನು ಹುತಾತ್ಮರೆಂದು ವೈಭವೀಕರಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನವು ಬಹುಪಕ್ಷೀಯ ವೇದಿಕೆಗಳಲ್ಲಿ ಸುಳ್ಳುಸುದ್ದಿ ಹರಡುವ ಪ್ರಯತ್ನ ನಡೆಸಿದ್ದು, ಇವು ಸಾಮೂಹಿಕ ತಿರಸ್ಕಾರಕ್ಕೆ ಅರ್ಹವಾಗಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಸೇರಿದಂತೆ ಭಾರತದ ವಿರುದ್ಧ ಹಲವಾರು ಆಧಾರರಹಿತ ಆರೋಪಗಳನ್ನು ಮಾಡಿದೆ. ಭಾರತದ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಅವು ಪ್ರತಿಕ್ರಿಯೆಗೆ ಅರ್ಹವಲ್ಲ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಭೂಪ್ರದೇಶವು ಭಾರತದ ಅವಿಭಾಜ್ಯ ಮತ್ತು ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿದೆ ಎಂಬುದನ್ನು ನಾನು ಇಲ್ಲಿ ಪುನರುಚ್ಚರಿಸುತ್ತೇನೆ. ಇದು ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿರುವ ಪ್ರದೇಶವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಜತಾಂತ್ರಿಕರು ಪಾಕಿಸ್ತಾನವನ್ನು ತನ್ನ ಕಾನೂನುಬಾಹಿರ ಆಕ್ರಮಣದಲ್ಲಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಕರೆ ನೀಡಿದರು.
ನಿಶ್ಯಸ್ತ್ರೀಕರಣ, ಜಾಗತಿಕ ಸವಾಲುಗಳ ಅಂತರಾಷ್ಟ್ರೀಯ ಸಮುದಾಯದ ಮೇಲೆ ಪರಿಣಾಮ ಮೊದಲ ಸಮಿತಿಯು ಬೀರುತ್ತದೆ. ಅಲ್ಲದೇ, ಅಂತರರಾಷ್ಟ್ರೀಯ ಭದ್ರತಾ ಆಡಳಿತದಲ್ಲಿನ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುತ್ತದೆ.