ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಭಾರತ ಸೇರಿದಂತೆ ವಿಶ್ವದ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ, ಇನ್ನಿಲ್ಲದ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ದೈನಂದಿನ ಬಳಕೆಯ ವಸ್ತುಗಳ ಬೆಲೆ ಮುಗಿಲು ಮುಟ್ಟಿರುವ ಕಾರಣ ಜನಸಾಮಾನ್ಯರು ಆಹಾರಕ್ಕೂ ಪರದಾಡುವಂತಾಗಿದೆ. ಇಷ್ಟಾದರೂ ಕೂಡ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲಿಸುವ ತನ್ನ ಕಾರ್ಯವನ್ನು ಮುಂದುವರಿಸುತ್ತಿದೆ.
ಬೆಲೆ ಏರಿಕೆಯಿಂದ ಈಗಾಗಲೇ ಹೈರಾಣಾಗಿ ಹೋಗಿರುವ ಪಾಕಿಸ್ತಾನದ ಜನತೆಗೆ ಇದರ ಮಧ್ಯೆ ಇದೀಗ ತೈಲಬೆಲೆ ಏರಿಕೆಯ ಬಿಸಿಯೂ ಕೂಡ ತಟ್ಟಿದ್ದು, ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 26.02 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 17.37 ರೂಪಾಯಿ ಏರಿಕೆಯೊಂದಿಗೆ ಕ್ರಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ 333.38 ಹಾಗೂ 329.18 ರೂಪಾಯಿ ತಲುಪಿದೆ (ಪಾಕಿಸ್ತಾನದ ರೂಪಾಯಿ). ಇದು ಅಗತ್ಯ ವಸ್ತುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲು ಕಾರಣವಾಗುತ್ತದೆ ಎಂಬ ಆತಂಕ ಅಲ್ಲಿನ ಜನತೆಯನ್ನು ಕಾಡುತ್ತಿದೆ.
ಪಾಕ್ ಜನತೆ ಶನಿವಾರದಿಂದಲೇ ದೇಶದಾದ್ಯಂತ ಪ್ರತಿಭಟನೆಗೆ ಮುಂದಾಗಿದ್ದು, ಆದರೆ ದೊಡ್ಡ ಮಟ್ಟದಲ್ಲಿ ಸಾಲ ಮಾಡಿಕೊಂಡಿರುವ ಅಲ್ಲಿನ ಸರ್ಕಾರ, ಐಎಂಎಫ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಐಎಂಎಫ್ ನಿಯಮಗಳ ಪ್ರಕಾರ ಯಾವುದೇ ಸಬ್ಸಿಡಿ ನೀಡುವಂತಿಲ್ಲವಾದ ಕಾರಣ ತೈಲಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಪಾಕಿಸ್ತಾನದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದಿವಾಳಿಯ ಅಂಚಿಗೆ ಬಂದು ನಿಲ್ಲುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.