ಇಸ್ಲಾಮಾಬಾದ್: ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಪಾಕಿಸ್ತಾನ ರೇಪಿಸ್ಟ್ ಗಳ ಲೈಂಗಿಕ ಶಕ್ತಿಯನ್ನು ಕುಂದಿಸುವ ಶಿಕ್ಷೆ ವಿಧಿಸಲು ತೀರ್ಮಾನ ಕೈಗೊಂಡಿದೆ.
ಅತ್ಯಾಚಾರ ಪ್ರಕರಣಗಳ ಶೀಘ್ರ ತನಿಖೆ, ಸಾಕ್ಷ್ಯ ಸಂಗ್ರಹ, ವಿಚಾರಣೆ ನಡೆಸಲು ಪೂರ್ಣ ಸ್ವಾತಂತ್ರ್ಯ ಮತ್ತು ಲೈಂಗಿಕ ಶಕ್ತಿ ಕುಂದಿಸುವ ಶಿಕ್ಷೆ ಜಾರಿ ಸೇರಿದಂತೆ ಮಹತ್ವದ ಅಂಶಗಳು ಒಳಗೊಂಡಿರುವ ಮಸೂದೆಯನ್ನು ಪಾಕಿಸ್ತಾನ ಸಂಸತ್ ಅಂಗೀಕರಿಸಿದೆ.
ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ 20 -25 ವರ್ಷ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸಲು ಅವಕಾಶವಿದೆ. ಶಿಕ್ಷೆ ಜಾರಿ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಾಸಾಯನಿಕ ಇಂಜೆಕ್ಷನ್ ಮೂಲಕ ಲೈಂಗಿಕ ಶಕ್ತಿಯನ್ನು ಕುಂದಿಸಲಾಗುತ್ತದೆ. ಅಮೆರಿಕದ ಕೆಲವು ರಾಜ್ಯಗಳು, ದಕ್ಷಿಣ ಕೊರಿಯಾ, ಜೆಕ್ ಗಣರಾಜ್ಯ ಮೊದಲಾದ ದೇಶಗಳಲ್ಲಿ ಇಂತಹ ಶಿಕ್ಷೆ ಜಾರಿಯಲ್ಲಿದೆ.