
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೊಸ ಚುನಾವಣೆಗೆ ಒತ್ತಾಯಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರ ‘ಮಾರ್ಚ್ ಟು ಚಾವೋಸ್’(ಅವ್ಯವಸ್ಥೆ ವಿರುದ್ಧ ನಡಿಗೆ) ಮುಂದುವರೆದಿದೆ.
ಇದೇ ವೇಳೆ ಪಾಕಿಸ್ತಾನದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಗುರುವಾರ ಮುಂಜಾನೆ ಇಮ್ರಾನ್ ಖಾನ್ ಇಸ್ಲಾಮಾಬಾದ್ ಗೆ ಆಗಮಿಸುತ್ತಿದ್ದಂತೆ ಪಾಕಿಸ್ತಾನದ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಪಿಟಿಐ ಬೆಂಬಲಿಗರೊಂದಿಗೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಲಾಗಿದೆ.
ಶೆಹಬಾಜ್ ಷರೀಫ್ ಸರ್ಕಾರ ಹೊಸ ಚುನಾವಣೆಯ ದಿನಾಂಕವನ್ನು ಘೋಷಿಸುವವರೆಗೆ ಪ್ರತಿಭಟನಾ ಪ್ರದೇಶವನ್ನು ಖಾಲಿ ಮಾಡುವುದಿಲ್ಲ ಎಂದು ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ ನಂತರ ಫೆಡರಲ್ ರಾಜಧಾನಿಯ ಡಿ-ಚೌಕ್ ಗೆ ತೆರಳದಂತೆ ಅಧಿಕಾರಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಇಡೀ ದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಅವಿಶ್ವಾಸ ಮತದಿಂದ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಎಲ್ಲಾ ಪಾಕಿಸ್ತಾನಿಗಳು ತಮ್ಮ ತಮ್ಮ ನಗರಗಳಲ್ಲಿ ಬೀದಿಗಿಳಿಯುವಂತೆ ಕರೆ ನೀಡಿದ್ದಾರೆ. ‘ನೈಜ ಸ್ವಾತಂತ್ರ್ಯ’ಕ್ಕಾಗಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಮನೆಗಳಿಂದ ಹೊರಬರುವಂತೆ ಅವರು ಮನವಿ ಮಾಡಿದ್ದಾರೆ.
ಸೆನೆಟರ್ ಅಯೋನ್ ಅಬ್ಬಾಸ್ ಬಪ್ಪಿ ಅವರು, ಡಿ-ಚೌಕ್ ನಲ್ಲಿ ಶೆಲ್ ದಾಳಿ ಮುಂದುವರೆದಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಮಾಡಿದ ಪ್ರಚಂಡ ಪ್ರಯತ್ನ. ಅವರು ಎಂತಹ ಇನ್ನಿಂಗ್ಸ್ ಆಡುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿದ್ದಂತೆ ಪಿಟಿಐ ಅಧಿಕೃತ ಖಾತೆ ಟ್ವೀಟ್ ಮಾಡಿದೆ.
ಇಸ್ಲಾಮಾಬಾದ್ ನಲ್ಲಿ ಪಿಟಿಐ ಮೆರವಣಿಗೆಯನ್ನು ನಿಷೇಧಿಸುವ ಸರ್ಕಾರದ ನಿರ್ಧಾರದ ನಂತರ ದೇಶವು ರಾಜಕೀಯ ಘರ್ಷಣೆಯತ್ತ ಸಾಗುತ್ತಿರುವಂತೆ ತೋರುತ್ತಿದೆ ಎಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರ ಮೇಲಿನ ದಬ್ಬಾಳಿಕೆಗಳು ಮತ್ತು ರಾಜಧಾನಿಯ ಘಟನೆಗಳು ಅಸ್ಥಿರ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಸರ್ಕಾರ ಈಗಾಗಲೇ ಭಯಭೀತರಾಗಿರುವಂತೆ ತೋರುತ್ತಿದೆ ಎಂದು ‘ಡಾನ್’ ಪತ್ರಿಕೆಯಲ್ಲಿ ಲೇಖಕ ಜಾಹಿದ್ ಹುಸೇನ್ ಬರೆದಿದ್ದಾರೆ.
ಇಮ್ರಾನ್ ಖಾನ್ ಆರಂಭಿಸಿದ ಪ್ರತಿಭಟನಾ ಮೆರವಣಿಗೆಯಿಂದಾಗಿ ಹೆಚ್ಚುತ್ತಿರುವ ಅಶಾಂತಿಯನ್ನು ನಿಯಂತ್ರಿಸಲು ವಿಫಲವಾದ ಶೆಹಬಾಜ್ ಷರೀಫ್ ಸರ್ಕಾರ ಗುರುವಾರ ಮುಂಜಾನೆ ಇಸ್ಲಾಮಾಬಾದ್ ಗೆ ಇಮ್ರಾನ್ ಖಾನ್ ಪ್ರವೇಶಿಸಿದ್ದರಿಂದ ಕೆಂಪು ವಲಯ ರಕ್ಷಿಸಲು ಸೈನ್ಯಕ್ಕೆ ಸೂಚನೆ ನೀಡಿದೆ.
ಇಸ್ಲಾಮಾಬಾದ್ ಕ್ಯಾಪಿಟಲ್ ಟೆರಿಟರಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಅನುಗುಣವಾಗಿ, ಫೆಡರಲ್ ಸರ್ಕಾರವು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಸಂವಿಧಾನದ 245 ನೇ ವಿಧಿಯ ಅಡಿಯಲ್ಲಿ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಭಾರೀ ಸಂಖ್ಯೆಯ ಸೇನೆ ನಿಯೋಜಿಸಲು ಅಧಿಕಾರ ನೀಡುತ್ತ ಎಂದು ಪಾಕಿಸ್ತಾನ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸರ್ಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಇಮ್ರಾನ್ ಖಾನ್ ಫೆಡರಲ್ ರಾಜಧಾನಿಯನ್ನು ಪ್ರವೇಶಿಸಿದ ನಂತರ ಪಾಕಿಸ್ತಾನ ಸರ್ಕಾರವು ಪ್ರಮುಖ ಸರ್ಕಾರಿ ಕಟ್ಟಡಗಳನ್ನು ರಕ್ಷಿಸಲು ಸೇನೆಯನ್ನು ನಿಯೋಜಿಸಿದೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್, ಸಂಸತ್ ಭವನ, ಪ್ರೆಸಿಡೆನ್ಸಿ, ಪ್ರಧಾನ ಮಂತ್ರಿ ಕಚೇರಿ ಮತ್ತು ಇತರ ಪ್ರಮುಖ ಸರ್ಕಾರಿ ಕಟ್ಟಡಗಳ ರಕ್ಷಣೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲ ನಾಗರಿಕರು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಶಾಂತಿಯುತವಾಗಿ ಸಮಾವೇಶಗೊಳ್ಳಲು ಮತ್ತು ಪ್ರತಿಭಟಿಸಲು ಎಲ್ಲ ಹಕ್ಕುಗಳನ್ನು ಹೊಂದಿವೆ ಎಂದು ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ(HRCP) ಟ್ವೀಟ್ ಮಾಡಿದೆ.