ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಪ್ರಾಂಶುಪಾಲನಿಂದ 45 ಕ್ಕೂ ಅಧಿಕ ಮಹಿಳೆಯರು ದೌರ್ಜನ್ಯಕ್ಕೊಳಗಾಗಿದ್ದಾರೆ.
ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪದ ಮೇಲೆ ಪ್ರಾಂಶುಪಾಲನನ್ನು ಬಂಧಿಸಿದ ಪ್ರಕರಣದಲ್ಲಿ 45 ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವುದು ಗೊತ್ತಾಗಿದೆ ಎಂದು ತನಿಖಾಧಿಕಾರಿ(ಐಒ) ಮಂಗಳವಾರ ಹೇಳಿದ್ದಾರೆ.
ಕರಾಚಿಯ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಾಂಶುಪಾಲರನ್ನು ಸೋಮವಾರ ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ.
ಪ್ರಾಂಶುಪಾಲರು ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್(ಸಿಸಿಟಿವಿ) ದೃಶ್ಯಾವಳಿಗಳನ್ನು ಬಳಸಿಕೊಂಡು ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಪೊಲೀಸ್ ತನಿಖಾ ತಂಡವು ಅವರ ಸೆಲ್ ಫೋನ್‌ನಿಂದ ಅಂತಹ 25 ಸಣ್ಣ ವೀಡಿಯೊ ಕ್ಲಿಪ್‌ಗಳನ್ನು ವಶಪಡಿಸಿಕೊಂಡಿದೆ. ಪ್ರಾಂಶುಪಾಲರು ಮತ್ತು ಮಹಿಳಾ ಶಿಕ್ಷಕಿಯ ಅಶ್ಲೀಲ ವೀಡಿಯೊ ಅಂತರ್ಜಾಲದಲ್ಲಿ ಪ್ರಸಾರವಾದ ನಂತರ ಹಗರಣವು ಹೊರಹೊಮ್ಮಿದೆ.
ಪ್ರಾಂಶುಪಾಲರ ಕಚೇರಿಗೆ ಮೊಹರು ಹಾಕಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗುವುದು. ಇರ್ಫಾನ್ ಗಫೂರ್ ಮೆಮನ್ ಎಂದು ಗುರುತಿಸಲಾದ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಸ್ಟೀಲ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಕೊಡಿಸುವ ನೆಪದಲ್ಲಿ ಪ್ರಾಂಶುಪಾಲ ಶಿಕ್ಷಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ವಿಡಿಯೋ ಚಿತ್ರೀಕರಿಸಿಕೊಂಡು ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳಲಾಗಿದ್ದು, ಆತನ ಮೊಬೈಲ್ ಫೋನ್ ಅನ್ನು ಸಹ ಪರಿಶೀಲಿಸಲಾಗಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.