ಮನುಕುಲ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆಯೊಂದರಲ್ಲಿ, ಧರ್ಮವಿರೋಧಿ ಮಾತನಾಡಿದರು ಎಂಬ ಕಾರಣಕ್ಕೆ ಗಾರ್ಮೆಂಟ್ ಕಾರ್ಖಾನೆಯೊಂದನ್ನು ಮುನ್ನಡೆಸುವ ಶ್ರೀಲಂಕಾದ ಎಕ್ಸಿಕ್ಯೂಟಿವ್ ಒಬ್ಬರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲು ತೂರಿ ಸಾಯಿಸಿ, ಆತನ ದೇಹವನ್ನು ಸುಟ್ಟುಹಾಕಲಾಗಿದೆ.
ತಮ್ಮ 40ರ ವಯೋಮಾನದಲ್ಲಿರುವ ಪ್ರಿಯಾಂತಾ ಕುಮಾರಾ, ಪಂಜಾಬ್‌ನ ಸಿಯಾಲ್‌ಕೋಟ್ ಜಿಲ್ಲೆಯಲ್ಲಿರುವ ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ಜಿಎಂ ಆಗಿ ಕೆಲಸ ಮಾಡುತ್ತಿದ್ದರು.
“ತೆಹ್ರಿಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಪೋಸ್ಟರ್ ಒಂದನ್ನು ಕುಮಾರಾ ಹರಿದುಹಾಕಿ, ಕಸದ ಬುಟ್ಟಿಗೆ ಎಸೆದಿದ್ದು, ಅದರಲ್ಲಿ ಕುರಾನ್‌ನ ಕೆಲ ಸಾಲುಗಳಿದ್ದವು ಎಂಬ ವದಂತಿ ಹಬ್ಬಿದೆ. ಇಸ್ಲಾಮಿಸ್ಟ್ ಪಾರ್ಟಿಯ ಈ ಪೋಸ್ಟರ್ ಅನ್ನು ಕುಮಾರಾರ ಕಚೇರಿಗೆ ಅಂಟಿಕೊಂಡಿರುವ ಗೋಡೆಯೊಂದಕ್ಕೆ ಅಂಟಿಸಲಾಗಿತ್ತು.ಈ ಪೋಸ್ಟರ್ ಅನ್ನು ತೆರವುಗೊಳಿಸುತ್ತಿರುವ ಕುಮಾರಾರನ್ನು ಕಂಡ ಕಾರ್ಖಾನೆಯ ಇಬ್ಬರು ಸಿಬ್ಬಂದಿಗಳು ಸುದ್ದಿ ಹಬ್ಬಿಸಿದ್ದಾರೆ, ” ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
’ಧರ್ಮವಿರೋಧಿ’ ಘಟನೆ ಎಂದುಕೊಂಡು ದಿಢೀರನೇ ನೂರಾರು ಮಂದಿ ಕಾರ್ಖಾನೆ ಹಾಗೂ ಅಕ್ಕಪಕ್ಕದ ಜಾಗಗಳಲ್ಲಿ ಜಮಾಯಿಸಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಟಿಎಲ್‌ಪಿಯ ಬೆಂಬಲಿಗರಾಗಿದ್ದಾರೆ.
“ವ್ಯಕ್ತಿಯನ್ನು ಕಾರ್ಖಾನೆಯಿಂದ ಹೊರಗೆಳೆದ ಗುಂಪು ಆತನಿಗೆ ತೀವ್ರ ಹಿಂಸೆ ನೀಡಲು ಆರಂಭಿಸಿದೆ. ಇದರಿಂದ ಉಂಟಾದ ಗಾಯಗಳೊಂದಿಗೆ ಆತ ಮೃತಪಟ್ಟ ಎಂದು ತಿಳಿಯುತ್ತಲೇ, ಪೊಲೀಸರು ಸ್ಥಳಕ್ಕೆ ಧಾವಿಸುವ ಮುನ್ನವೇ ಆತನ ದೇಹವನ್ನು ಸುಟ್ಟು ಹಾಕಿದ್ದಾರೆ,” ಎಂದು ಅಧಿಕಾರಿ ಹೇಳಿದ್ದಾರೆ.
“ಈ ಹಿಂಸಾಚಾರದಲ್ಲಿ ಭಾಗಿಯಾದ 100ಕ್ಕೂ ಹೆಚ್ಚು ಶಂಕಾಸ್ಪದರನ್ನು ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಲಾಗಿದೆ. ಈ ಹೀನಾಯ ಕೃತ್ಯದಲ್ಲಿ ಭಾಗಿಯಾದ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು, ಯಾರೊಬ್ಬರನ್ನೂ ಬಿಡುವುದಿಲ್ಲ,” ಎಂದು ಪಂಜಾಬ್ ಪೊಲೀಸ್‌ನ ಐಜಿಪಿ ರಾವ್ ಸರ್ದಾರ್ ಅಲಿ ಖಾನ್ ಹೇಳಿಕೆ ನೀಡಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಇಮ್ರಾನ್ ಖಾನ್, “ಸಿಯಾಲ್‌ಕೋಟ್ ಕಾರ್ಖಾನೆಯಲ್ಲಿ ನಡೆದ ಬರ್ಬರ ದಾಳಿಯಲ್ಲಿ ಶ್ರೀಲಂಕಾದ ಮ್ಯಾನೇಜರ್‌ರನ್ನು ಕೊಂದಿರುವುದು ಪಾಕಿಸ್ತಾನದ ಪಾಲಿಗೆ ನಾಚಿಕೆ ಪಡುವಂಥ ದಿನ. ನಾನು ತನಿಖೆಗಳ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇನೆ ಮತ್ತು ಘಟನೆಗೆ ಕಾರಣರಾದ ಪ್ರತಿಯೊಬ್ಬರನ್ನೂ ಕಾನೂನಿನ ಪ್ರಕಾರ ತೀವ್ರವಾಗಿ ಶಿಕ್ಷಿಸುವುದರಲ್ಲಿ ಯಾವುದೇ ತಪ್ಪಾಗುವುದಿಲ್ಲ. ಬಂಧನಗಳು ಚಾಲ್ತಿಯಲ್ಲಿವೆ,” ಎಂದಿದ್ದಾರೆ.
ಇದೇ ಟಿಎಲ್‌ಪಿ ಸಂಘಟನೆಯೊಂದಿಗೆ ರಹಸ್ಯ ಒಪ್ಪಂದವೊಂದನ್ನು ಮಾಡಿಕೊಂಡ ಇಮ್ರಾನ್ ಖಾನ್ ಸರ್ಕಾರ, ಸಂಘಟನೆಯ ಮುಖ್ಯಸ್ಥ ಸಾದ್ ರಿಜ಼್ವಿ ಹಾಗೂ ಭಯೋತ್ಪಾದನೆ ಆರೋಪದಲ್ಲಿ ಬಂಧಿಗಳಾಗಿದ್ದ 1,500ರಷ್ಟು ಕಾರ್ಯರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಂಜಾಬ್‌ನಲ್ಲಿ ಹಮ್ಮಿಕೊಂಡಿದ್ದ ತನ್ನ ಧರಣಿಯನ್ನು ಟಿಎಲ್‌ಪಿ ಹಿಂದಕ್ಕೆ ಪಡೆದಿತ್ತು. ಜೊತೆಗೆ, ಫ್ರಾನ್ಸ್‌ನಲ್ಲಿ ಪ್ರಚೋದನಾಕಾರಿ ಕಾರ್ಟೂನ್‌ಗಳು ಬಿತ್ತರಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ಫ್ರಾನ್ಸ್ ರಾಯಭಾರಿಯನ್ನು ಹಿಂದಕ್ಕೆ ಕಳುಹಿಸಬೇಕೆಂಬ ತನ್ನ ಬೇಡಿಕೆಯನ್ನು ಟಿಎಲ್‌ಪಿ ಹಿಂದಕ್ಕೆ ಪಡೆದಿತ್ತು.