ಇತ್ತೀಚೆಗೆ, ಪಾಕಿಸ್ತಾನದ ಕಾನೂನು ಸಂಸ್ಥೆಯೊಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದು, ಭಾರತೀಯ ಟ್ರೋಲರ್ ಗಳಿಗೆ ಈ ಪೋಸ್ಟ್ ಆಹಾರವಾಗಿದೆ.
ಹೌದು, 2022ರಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ಹೂಡಿಕೆ ಮಂಡಳಿ ಪ್ರಸ್ತಾಪಿಸಿದ ಹೂಡಿಕೆಯಿಂದ ಪೌರತ್ವ ಯೋಜನೆಗೆ ಸಂಬಂಧಿಸಿದ್ದಾಗಿದೆ. ಹೆಚ್ಚು ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸುವ ಮೂಲಕ ದೇಶದ ದುರ್ಬಲ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪಾಕಿಸ್ತಾನಿ ಕಂಪನಿಯಲ್ಲಿ ಅಮೆರಿಕನ್ ಡಾಲರ್ 1 ಮಿಲಿಯನ್ ಹೂಡಿಕೆ ಮಾಡಿದವರಿಗೆ ತಕ್ಷಣದ ಪೌರತ್ವವನ್ನು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಪ್ರಸ್ತಾವನೆಯನ್ನು ಆರಂಭದಲ್ಲಿ ಇಮ್ರಾನ್ ಖಾನ್ ಸ್ವಾಗತಿಸಿದರೂ, ಅಧಿಕೃತ ನೀತಿಯಾಗಿ ಅದರ ಅನುಷ್ಠಾನವನ್ನು ದೃಢೀಕರಿಸುವ ಯಾವುದೇ ಇತ್ತೀಚಿನ ವರದಿಗಳಿಲ್ಲ.
ಇದೀಗ ಈ ಪೋಸ್ಟ್ ವೈರಲ್ ಆಗಿದ್ದು, ಆನ್‌ಲೈನ್ ನಲ್ಲಿ ಟ್ರೋಲ್‌ಗಳ ಮಹಾಪೂರವೇ ಹರಿದಿದೆ. ಇದನ್ನು ರಂಜಿಸಿದ ಕೆಲವು ಭಾರತೀಯರು ಲಘು ಹಾಸ್ಯದಲ್ಲಿ ತೊಡಗಿದ್ದಾರೆ. ಪಾಕಿಸ್ತಾನಿಯರು ನಿಜವಾಗಿಯೂ ತುಂಬಾ ಆಶಾವಾದಿಗಳು ಅಂತಾ ಭಾರತೀಯರು ಕರೆದಿದ್ದಾರೆ.
ಹೂಡಿಕೆಯ ಮೂಲಕ ಪೌರತ್ವವು ಒಂದು ಪ್ರಕ್ರಿಯೆಯಾಗಿದ್ದು, ಆತಿಥೇಯ ದೇಶದ ಆರ್ಥಿಕತೆಯಲ್ಲಿ ಹೂಡಿಕೆ ಮಾಡುವ ಮೂಲಕ ಯಾವುದೇ ವ್ಯಕ್ತಿ ಎರಡನೇ ಪೌರತ್ವ ಮತ್ತು ಪಾಸ್‌ಪೋರ್ಟ್ ಅನ್ನು ಪಡೆಯಬಹುದು. ಈ ವಿಧಾನವು ಸಾಂಪ್ರದಾಯಿಕ ವಲಸೆ ಪ್ರಕ್ರಿಯೆಗಳಿಗೆ ಹೋಲಿಸಿದರೆ ವೇಗವಾಗಿ ಪೌರತ್ವವನ್ನು ಪಡೆದುಕೊಳ್ಳಲು ಅನುಮತಿಸುತ್ತದೆ.
ವರದಿ ಪ್ರಕಾರ, ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಸಿರುವ ಸಿಖ್ಖರು, ಅಫ್ಘನ್ನರು ಮತ್ತು ಚೀನಾದವರು ಸೇರಿದಂತೆ ಶ್ರೀಮಂತ ವಿದೇಶಿ ಪ್ರಜೆಗಳನ್ನು ಆಕರ್ಷಿಸುವ ಉದ್ದೇಶದಿಂದ ಪಾಕಿಸ್ತಾನವು ಶಾಶ್ವತ ನಿವಾಸ ಯೋಜನೆಯನ್ನು ಪರಿಚಯಿಸಲು ಹಿಂದೆ ನಿರ್ಧರಿಸಿತ್ತು. ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ದೇಶದ ಆರ್ಥಿಕತೆ ಮತ್ತು ರಾಷ್ಟ್ರೀಯ ಬೆಳವಣಿಗೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು.