ಭಯೋತ್ಪಾದಕತೆಯನ್ನು ಪೋಷಿಸಿಕೊಂಡು ಬರುತ್ತಿರುವ ನೆರೆ ರಾಷ್ಟ್ರ ಪಾಕಿಸ್ತಾನ ಈಗಾಗಲೇ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿದೆ. ಒಂದು ಹೊತ್ತಿನ ಊಟಕ್ಕೂ ಜನರು ಪರದಾಟ ನಡೆಸುತ್ತಿದ್ದು, ಆಹಾರ ಧಾನ್ಯಕ್ಕಾಗಿ ಸಾರ್ವಜನಿಕರು ಮುಗಿಬಿದ್ದಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದರ ಮಧ್ಯೆ ಈಗ ಮತ್ತೊಂದು ಶಾಕ್ ಎದುರಾಗಿದ್ದು, ಇಂದು ಬೆಳಿಗ್ಗೆ 7:30 ರಿಂದ ಪಾಕಿಸ್ತಾನದ ಹಲವು ಪ್ರಮುಖ ನಗರಗಳಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಬಲೂಚಿಸ್ತಾನಕ್ಕೆ ವಿದ್ಯುತ್ ಪೂರೈಸುವ ಲೈನ್ ಟ್ರಿಪ್ ಆಗಿರುವ ಪರಿಣಾಮ ವಿದ್ಯುತ್ ಕಡಿತಗೊಂಡಿದೆ ಎಂದು ಹೇಳಲಾಗಿದೆ.
ಇದರಿಂದಾಗಿ ಕರಾಚಿಯ ಶೇಕಡ 90 ಭಾಗದಲ್ಲಿ ವಿದ್ಯುತ್ ಸ್ಥಗಿತವಾಗಿದ್ದು, ಲಾಹೋರ , ಇಸ್ಲಾಮಾಬಾದ್ ಹಾಗೂ ಕ್ವೆಟ್ಟಾದಲ್ಲೂ ಸಹ ಇದೇ ಪರಿಸ್ಥಿತಿ ಇದೆಯೆಂದು ಹೇಳಲಾಗಿದೆ. ವಿದ್ಯುತ್ ಸ್ಥಗಿತಗೊಂಡಿರುವ ಪರಿಣಾಮ ಕಾರ್ಖಾನೆಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದು, ಟ್ರಿಪ್ ಆಗಿರುವ ವಿದ್ಯುತ್ ಸಂಪರ್ಕದ ಲೈನ್ ಸರಿಪಡಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.