ವಿಲಕ್ಷಣ ಘಟನೆಯೊಂದರಲ್ಲಿ, ಪಾಕಿಸ್ತಾನದ ಶಾಲೆಯೊಂದರ ಪುರುಷರು ಮತ್ತು ಮಹಿಳೆಯರ ಶೌಚಾಲಯಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ್ದ ಹಿನ್ನಲೆಯಲ್ಲಿ ಶಾಲೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಪಾಕಿಸ್ತಾನದ ಅತ್ಯಂತ ಹಳೆಯ ಇಂಗ್ಲಿಷ್ ದೈನಿಕವೊಂದರ ವರದಿಯ ಪ್ರಕಾರ, ಕರಾಚಿಯ ಸಫೂರಾ ಗೋಥ್‌ನ ಸ್ಕೀಮ್-33 ರಲ್ಲಿರುವ ದಿ ಹ್ಯಾರಾಕ್ಸ್ ಶಾಲೆಯಲ್ಲಿ ಗುಪ್ತ ಕ್ಯಾಮೆರಾ ಪತ್ತೆಯಾಗಿವೆ. ಮಹಿಳಾ ಶಿಕ್ಷಕಿಯೊಬ್ಬರು ನವೆಂಬರ್ 3 ರಂದು ಪ್ರಾಂತೀಯ ಶಿಕ್ಷಣ ಇಲಾಖೆಗೆ ದೂರು ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ಶಿಕ್ಷಕರು ಶಾಲೆಯ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾಗಳನ್ನು ಗುರುತಿಸಿದ್ದಾರೆ. ಅಲ್ಲದೇ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ತನಿಖಾಧಿಕಾರಿಗಳು ಶಾಲೆಯ ವಾಶ್ ರೂಂನಲ್ಲಿ ಕ್ಯಾಮೆರಾಗಳನ್ನು ಪತ್ತೆ ಮಾಡಿದ್ದಾರೆ. ಮಹಿಳಾ ಶಿಕ್ಷಕಿಯ ದೂರಿನ ಮೇರೆಗೆ ಶಿಕ್ಷಣ ಇಲಾಖೆಯ ತಪಾಸಣೆ ಮತ್ತು ಖಾಸಗಿ ಸಂಸ್ಥೆಗಳ ನೋಂದಣಿ ನಿರ್ದೇಶನಾಲಯವು ವಾಶ್ ರೂಂನಲ್ಲಿ ಹಲವಾರು ಕ್ಯಾಮೆರಾಗಳನ್ನು ಪತ್ತೆ ಮಾಡಿದೆ.
ನಂತರ, ಶಿಕ್ಷಣ ಇಲಾಖೆಯು ಶಾಲಾ ಇಲಾಖೆಗೆ ಶೋಕಾಸ್ ನೋಟಿಸ್ ಕಳುಹಿಸಿದ್ದು, ಅದರ ಪ್ರಾಂಶುಪಾಲರು ಮತ್ತು ಹಿರಿಯ ಅಧಿಕಾರಿಗಳನ್ನು ನವೆಂಬರ್ 4 ರಂದು ಇಲಾಖೆಯ ಮುಂದೆ ಹಾಜರಾಗಿ ವಿವಾದಾತ್ಮಕ ವಿಷಯದ ಬಗ್ಗೆ ತಮ್ಮ ನಿಲುವನ್ನು ವಿವರಿಸುವಂತೆ ಸೂಚಿಸಲಾಗಿದೆ. ಸಿಂಧ್ ಶಿಕ್ಷಣ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ, ಹುಡುಗಿಯರು ಮತ್ತು ಹುಡುಗರ ಶೌಚಾಲಯಗಳಿರುವ ವಾಶ್ ಬೇಸಿನ್‌ಗಳ ಪ್ರದೇಶದಲ್ಲಿ ರಂಧ್ರಗಳಿರುವ ಶೀಟ್‌ನ ಹಿಂದೆ ಸ್ಥಾಪಿಸಲಾದ ಗುಪ್ತ ಸಿಸಿಟಿವಿ ಕ್ಯಾಮೆರಾವನ್ನು ಅವರು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆದಾಗ್ಯೂ, ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ(ಎಫ್‌ಐಎ) ಸಿಂಧ್ ಸೈಬರ್ ಕ್ರೈಮ್ ವಲಯದ ಮುಖ್ಯಸ್ಥ ಇಮ್ರಾನ್ ರಿಯಾಜ್, ಶಾಲೆಯ ವಾಶ್‌ರೂಮ್‌ಗಳಲ್ಲಿ ಅಳವಡಿಸಲಾದ ಗುಪ್ತ ಕ್ಯಾಮೆರಾಗಳಿಂದ ರೆಕಾರ್ಡ್ ಮಾಡಿದ ವಿಡಿಯೋಗಳ ಬಳಕೆಯ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
ಸೈಬರ್ ಕ್ರೈಂ ವೃತ್ತದ ಮಹಾನಿರ್ದೇಶಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದಾರೆ, ಎಫ್‌ಐಎ ತಂಡವನ್ನು ಶಾಲೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯ ಚಲನವಲನಗಳನ್ನು ವೀಕ್ಷಿಸುವ ಸಲುವಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ದೂರುದಾರರು ಕೇಳಿದ ಸರಣಿ ಪ್ರಶ್ನೆಗಳಿಗೆ ಉತ್ತರ ನೀಡಲು ತಂಡದ ಯಾವುದೇ ಅಧಿಕಾರಿಗಳು ಶಿಕ್ಷಣ ಇಲಾಖೆಯತ್ತ ಮುಖ ಮಾಡಿಲ್ಲ. ನಿರ್ದೇಶನಾಲಯದ ಮಹಾನಿರ್ದೇಶಕ ಡಾ. ಮನ್ಸೂಬ್ ಹುಸೇನ್ ಸಿದ್ದಿಕಿ ಅವರು, ಸಿಂಧ್ ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಶಾಲೆಗೆ ನೀಡಲಾದ ನೋಂದಣಿ, ಮಾನ್ಯತೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.