ಕ್ವೆಟ್ಟಾ: ಪಾಕಿಸ್ತಾನದ 77 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಶಂಕಿತ ಉಗ್ರರು ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡುತ್ತಿದ್ದ ಮನೆ ಮತ್ತು ಅಂಗಡಿಯ ಮೇಲೆ ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.
ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿ ಗುಂಪು ಕ್ವೆಟ್ಟಾದ ಪ್ರಾಂತೀಯ ರಾಜಧಾನಿಯಲ್ಲಿ ಮಂಗಳವಾರ ನಡೆದ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಧ್ವಜಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಹೇಳಿತ್ತು. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯಿಂದ ಆಗಸ್ಟ್ 14, 1947 ರಂದು ಪಾಕಿಸ್ತಾನದ ಸ್ವಾತಂತ್ರ್ಯ ಪಡೆಯಿತು. ಇದೇ ಆ. 14 ಬುಧವಾರದಂದು ರಜಾದಿನವನ್ನು ಆಚರಿಸದಂತೆ ಜನರಿಗೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ದೇಶದ ಈಶಾನ್ಯದಲ್ಲಿರುವ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಗ್ರವಾದ ನಿರ್ಮೂಲನೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.