
ಲಾಹೋರ್: ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಹದಿಹರೆಯದವರು ಸೇರಿದಂತೆ ನಾಲ್ವರು ಮಹಿಳೆಯರನ್ನು ಜನರ ಗುಂಪೊಂದು ಎಳೆದಾಡಿ ಥಳಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಲಾಹೋರ್ ನಿಂದ 180 ಕಿಮೀ ದೂರದಲ್ಲಿರುವ ಫೈಸಲಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಹದಿಹರೆಯದವರೂ ಸೇರಿದಂತೆ ನಾಲ್ವರು ಮಹಿಳೆಯರನ್ನು ವಿವಸ್ತ್ರಗೊಳಿಸಿದ ನಂತರ ತಮ್ಮನ್ನು ಮುಚ್ಚಿಕೊಳ್ಳಲು ಬಟ್ಟೆಯ ತುಂಡನ್ನು ನೀಡುವಂತೆ ತಮ್ಮ ಸುತ್ತಲಿನ ಜನರಿಗೆ ಮನವಿ ಮಾಡುತ್ತಿರುವುದು ವೈರಲ್ ವೀಡಿಯೊದಲ್ಲಿ ಕಂಡುಬಂದಿದೆ.
ಮಹಿಳೆಯರನ್ನು ದೊಣ್ಣೆಗಳಿಂದಲೂ ಥಳಿಸಲಾಗಿದೆ. ಮಹಿಳೆಯರು ತಮ್ಮನ್ನು ಬಿಡುವಂತೆ ಅಳುತ್ತಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಕಾಲ ಅವರನ್ನು ಬೀದಿಗಳಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ.
ಘಟನೆಯ ಒಂದೆರಡು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪಂಜಾಬ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ದುರದೃಷ್ಟಕರ ಘಟನೆಯಲ್ಲಿ ನಾವು ಐದು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರಲ್ಲಿ ಭಾಗಿಯಾದ ಎಲ್ಲರಿಗೂ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಐವರು ಶಂಕಿತರು ಮತ್ತು ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣದ ಪ್ರಕಾರ, ಫೈಸಲಾಬಾದ್‌ನ ಬಾವಾ ಚಾಕ್ ಮಾರುಕಟ್ಟೆಗೆ ತ್ಯಾಜ್ಯ ಸಂಗ್ರಹಿಸಲು ಹೋಗಿದ್ದೆವು ಎಂದು ಸಂತ್ರಸ್ತೆ ಹೇಳಿದ್ದಾರೆ.
ನಾವು ಬಾಯಾರಿಕೆಯಿಂದ ಉಸ್ಮಾನ್ ಎಲೆಕ್ಟ್ರಿಕ್ ಅಂಗಡಿಯೊಳಗೆ ಹೋಗಿ ನೀರಿನ ಬಾಟಲಿಯನ್ನು ಕೇಳಿದೆವು. ಆದರೆ, ನಾವು ಕಳ್ಳತನ ಮಾಡುವ ಉದ್ದೇಶದಿಂದ ಅಂಗಡಿಗೆ ಪ್ರವೇಶಿಸಿದ್ದೇವೆ ಎಂದು ಅದರ ಮಾಲೀಕ ಸದ್ದಾಂ ಆರೋಪಿಸಿದರು. ಸದ್ದಾಂ ಮತ್ತು ಇತರ ಪುರುಷರು ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು. ನಂತರ ಅವರು ನಮ್ಮನ್ನು ಮಾರುಕಟ್ಟೆಯ ಸ್ಥಳದಲ್ಲಿ ವಿವಸ್ತ್ರಗೊಳಿಸಿ, ಎಳೆದೊಯ್ದು ಥಳಿಸಿದರು. ನಮ್ಮನ್ನು ಬಟ್ಟೆ ಬಿಚ್ಚಿದ ನಂತರ ನಮ್ಮ ವಿಡಿಯೋಗಳನ್ನೂ ಮಾಡಿದ್ದಾರೆ. ಈ ದುಷ್ಕೃತ್ಯವನ್ನು ತಡೆಯಲು ಅಲ್ಲಿದ್ದವರು ಪ್ರಯತ್ನಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸದ್ದಾಂ ಸೇರಿದಂತೆ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಫೈಸಲಾಬಾದ್ ಪೊಲೀಸ್ ಮುಖ್ಯಸ್ಥ ಡಾ.ಅಬಿದ್ ಖಾನ್ ತಿಳಿಸಿದ್ದಾರೆ.