‘ಅದೃಷ್ಟ’ ಎಂಬುದು ಯಾರ ಪಾಲಿಗೆ ಯಾವ ರೀತಿಯಲ್ಲಿ ಒಲಿದು ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಹೊಟ್ಟೆ ಹಸಿವಿನಿಂದ ಬಳಲುತ್ತಿರುವವರಿಗೆ ಮೃಷ್ಟಾನ್ನ ಭೋಜನ ಸಿಕ್ಕರೆ ಹೇಗಿರಬೇಡ. ಹೌದು, ಇಂಥವುದೇ ಒಂದು ಪ್ರಕರಣ ಪಾಕಿಸ್ತಾನದಲ್ಲಿ ನಡೆದಿದೆ.
ಎಲ್ಲರಿಗೂ ಗೊತ್ತಿರುವಂತೆ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟಿನಿಂದ ಬಳಲುತ್ತಿದ್ದು, ಅಲ್ಲಿನ ಜನತೆ ಒಂದು ದಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಡ ಮೀನುಗಾರನೊಬ್ಬನಿಗೆ ಸಮುದ್ರದಲ್ಲಿ ಸಿಕ್ಕ ಮೀನು ಈಗ ಕೋಟ್ಯಾಂತರ ರೂಪಾಯಿ ಗಳಿಸಿಕೊಟ್ಟಿದೆ.
ಕರಾಚಿ ಬಳಿಯ ಇಬ್ರಾಹಿಂ ಹೈದರಿ ಗ್ರಾಮದ ಹಾಜಿ ಬಲೋಚ್ ಎಂಬ ಮೀನುಗಾರ ಇಂತಹ ಅದೃಷ್ಟವಂತನಾಗಿದ್ದು, ಮೀನುಗಾರಿಕೆಗೆ ತೆರಳಿದ್ದ ವೇಳೆ ಈತನಿಗೆ ಅತಿ ಅಪರೂಪದ ‘ಸೋವಾ ಅಥವಾ ಕಿರ್’ ಎಂಬ ಮೀನು ಸಿಕ್ಕಿತ್ತು.
ಸಾಮಾನ್ಯವಾಗಿ ಈ ಮೀನು ಮಾರುಕಟ್ಟೆಯಲ್ಲಿ 20 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದ್ದು, ಆದರೆ ಇದನ್ನು ಹರಾಜು ಹಾಕಿದಾಗ ಏಳು ಕೋಟಿ ರೂಪಾಯಿಗಳಿಗೆ ಬಿಕರಿಯಾಗಿದೆ. ಔಷಧೀಯ ಗುಣಗಳಿರುವ ಈ ಮೀನಿಗೆ ವಿಶ್ವದಾದ್ಯಂತ ವ್ಯಾಪಕ ಬೇಡಿಕೆ ಇರುವ ಕಾರಣ ಇಷ್ಟೊಂದು ಬೆಲೆ ಸಿಕ್ಕಿದೆ ಎನ್ನಲಾಗಿದೆ.