ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸುಪ್ರೀಂ ಕೋರ್ಟ್ ರಿಲೀಫ್ ಕೊಟ್ಟಿದ್ರೂ ಅವರಿಗೆ ತೊಂದರೆಗಳು ತಪ್ಪುವಂತಿಲ್ಲ.
ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರದ ಪ್ರಕರಣದಲ್ಲಿ ಅವರಿಗೆ ಕೋರ್ಟ್ ದೊಡ್ಡ ಪರಿಹಾರ ಕೊಟ್ಟಿದೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅವರ ಬಂಧನವನ್ನು ಕಾನೂನುಬಾಹಿರ ಮತ್ತು ಅಸಿಂಧು ಎಂದು ಕರೆದಿದ್ದು ತಕ್ಷಣ ಬಿಡುಗಡೆ ಮಾಡುವಂತೆ ಸೂಚಿಸಿದ್ರೂ ಇಮ್ರಾನ್ ಖಾನ್ ರದ್ದು ಎನ್ನಲಾದ ಅದೊಂದು ಆಡಿಯೋ ಇದೀಗ ಮತ್ತೊಂದು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕಿ ಮುಸರತ್ ಜಮ್‌ಶೆಡ್ ಚೀಮಾ ಅವರೊಂದಿಗೆ ಇಮ್ರಾನ್ ಖಾನ್ ಸಂಭಾಷಣೆಯ ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.
ಆಡಿಯೋ ಕ್ಲಿಪ್‌ನಲ್ಲಿ, ಖಾನ್ ಮತ್ತು ಚೀಮಾ ಇತ್ತೀಚಿನ ನ್ಯಾಯಾಲಯದ ಬೆಳವಣಿಗೆಗಳು ಮತ್ತು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಯ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದ್ದಾರೆ.
ಖಾನ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಆಡಿಯೋದಲ್ಲಿ ಮಾತಾಡಿರುವ ಚೀಮಾ, “ನಾವು ಇದೀಗ ಹೈಕೋರ್ಟ್‌ನಲ್ಲಿ ಕುಳಿತಿದ್ದೇವೆ ಮತ್ತು ಖಾನ್ ಸಾಹಿಬ್ ಅವರನ್ನು ನಮ್ಮ ಮುಂದೆ ತರಲು ಒತ್ತಾಯಿಸಿದ್ದೇವೆ ಇಲ್ಲದಿದ್ದರೆ ನಾವು ಬಿಡುವುದಿಲ್ಲ. ನಿಮ್ಮ ಮೊಕದ್ದಮೆಯನ್ನೂ ಮುಖ್ಯ ನ್ಯಾಯಾಧೀಶರು ವಿಚಾರಣೆ ಮಾಡುತ್ತಾರೆ” ಎಂದು ಹೇಳಿದ್ದಾರೆ.
ದೂರವಾಣಿ ಸಂಭಾಷಣೆಯ ಸಮಯದಲ್ಲಿ ಇಮ್ರಾನ್ ಖಾನ್ ಅವರು ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (NAB) ವಶದಲ್ಲಿದ್ದರು ಎಂದು ವರದಿಯಾಗಿದೆ.
ತಮ್ಮ ಬಂಧನವನ್ನು ಟೀಕಿಸಿದ ಇಮ್ರಾನ್ ಖಾನ್ ಅಧಿಕಾರಿಗಳು ಏನೇ ಮಾಡಿದರೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಚೀಮಾಗೆ ಹೇಳಿದರು. “ಮುಖ್ಯ ನ್ಯಾಯಾಧೀಶರು ಏನು ಮಾಡುತ್ತಿದ್ದಾರೆ?” ಎಂದು ಖಾನ್ ಕೇಳಿರುವುದು ಆಡಿಯೋದಲ್ಲಿದೆ.
“ಕೂಡಲೇ ಆಜಮ್ ಜೊತೆ ಮಾತನಾಡಿ ಮತ್ತು ಇತರ ಜನರೊಂದಿಗೆ ಮಾತನಾಡಲು ಹೇಳಿ” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇಂದು ಜಾಮೀನಿಗಾಗಿ ಇಸ್ಲಾಮಾಬಾದ್ ಇಮ್ರಾನ್ ಖಾನ್ ಹೈಕೋರ್ಟ್‌ಗೆ ಹಾಜರಾಗಲಿದ್ದಾರೆ. ಬಳಿಕ ರಾಜಧಾನಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೇ 9 ರಂದು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಯಿತು. ನಂತರ ಅಲ್-ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ದಿನಗಳ ರಿಮಾಂಡ್‌ಗಾಗಿ ಎನ್‌ಎಬಿಗೆ ಹಸ್ತಾಂತರಿಸಲಾಯಿತು.
70 ವರ್ಷ ವಯಸ್ಸಿನ ಇಮ್ರಾನ್ ಖಾನ್ ಬಂಧನವು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ಉಂಟುಮಾಡಿತು. ಶಾಂತಿ ಸುವ್ಯಸ್ಥೆಗಾಗಿ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ಇಸ್ಲಾಮಾಬಾದ್, ಪಂಜಾಬ್, ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಸೇನೆಯನ್ನು ನಿಯೋಜಿಸಿದರು. ಇಲ್ಲಿಯವರೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ.