
ಬಡತನಕ್ಕೆ ಸಿಲುಕಿದ ಪಾಕಿಸ್ತಾನದ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಪಾಕಿಸ್ತಾನದ ರಾಷ್ಟ್ರೀಯ ವಿಮಾನಯಾನ ಸೇವೆ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್(ಪಿಐಎ) ಕೆಲಸ ಸ್ಥಗಿತ ಮಾಡುವ ಹಂತದಲ್ಲಿದೆ.
ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಶುಕ್ರವಾರ ಪಿಐಎ ಇದನ್ನು ಒಪ್ಪಿಕೊಂಡಿದೆ. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬಿಲ್‌ಗಳು ಮತ್ತು ಸಂಬಳವನ್ನು ಪಾವತಿಸಲು ಹೆಣಗಾಡುತ್ತಿದೆ. ಇದರೊಂದಿಗೆ, ಹೆಚ್ಚುತ್ತಿರುವ ಸಾಲದಿಂದಾಗಿ 31 ಅಂತರರಾಷ್ಟ್ರೀಯ ವಿಮಾನಗಳಲ್ಲಿ 14 ಅನ್ನು ನಿಲ್ಲಿಸಬೇಕಾಯಿತು ಎಂದು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್(ಪಿಐಎ) ವಕ್ತಾರ ಅಬ್ದುಲ್ಲಾ ಹಫೀಜ್ ಅವರು ಹೇಳಿದ್ದಾರೆ.
ಏರ್‌ಲೈನ್ಸ್ ಬ್ಯಾಂಕ್ ಗಳಿಂದ ಕೆಲವು ಹಣದ ನೆರವು ಕೇಳಿದೆ. ಆದರೆ ಸಹಾಯ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ಬ್ಯಾಲೆನ್ಸ್ ಶೀಟ್ ಸವಾಲುಗಳಿಂದಾಗಿ ನಾವು ಕಷ್ಟಪಡುತ್ತಿದ್ದೇವೆ. ಗುರುವಾರ ಮೂರು ವಿಮಾನಗಳನ್ನು ನಿಲ್ಲಿಸಲಾಗಿದೆ. ಸಂಬಳವನ್ನು ತಡವಾಗಿ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.
ಇಂಧನ ವೆಚ್ಚ ಪಾವತಿಸದ ಕಾರಣ ಅನೇಕ ಗಲ್ಫ್ ರಾಷ್ಟ್ರಗಳಲ್ಲಿ PIA ವಿಮಾನಗಳನ್ನು ಹಾರಿಸುವುದನ್ನು ನಿಲ್ಲಿಸಲಾಗಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಸರಿಯಾಗಿ ನಿರ್ವಹಿಸಲು ತುರ್ತಾಗಿ 636 ಕೋಟಿ ರೂ. ಬೇಕಾಗುತ್ತದೆ. 25 ವಿಮಾನಗಳು ಇನ್ನೂ ಹಾರಾಟ ನಡೆಸುತ್ತಿವೆ, ಉಳಿದವು ಸ್ಥಗಿತಗೊಂಡಿವೆ.
ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಮುಚ್ಚುವ ಹಂತದಲ್ಲಿದೆ. ತುರ್ತು ನಿಧಿ ಲಭ್ಯವಾಗದಿದ್ದರೆ ಕೆಲವೇ ದಿನಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು ಎಂದು ಹೇಳಲಾಗಿದೆ.