ಶನಿವಾರ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಿನಾರ್ ಇ ಪಾಕಿಸ್ತಾನದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಮ್ಮ ಬಟ್ಟೆಯನ್ನು ಹರಿದಿದ್ದು ಮಾತ್ರವಲ್ಲದೇ ನನ್ನನ್ನು ಎಳೆದಾಡಿದ್ದಾರೆ ಎಂದು ಪಾಕ್ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.
ಪಾಕಿಸ್ತಾನದ ಈ ಮಹಿಳೆ ಟಿಕ್ ಟಾಕರ್ ಕೂಡ ಆಗಿದ್ದಾರೆ. ಪ್ರಕರಣ ಸಂಬಂಧ ಮಹಿಳೆ ಲೋರಿ ಅಡ್ಡಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಈ ದೂರಿನಲ್ಲಿ ತಮ್ಮ ಜೊತೆಗಿದ್ದ ಆರು ಮಂದಿಯ ಜೊತೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ಮುನ್ನೂರರಿಂದ ನಾಲ್ಕುನೂರು ಮಂದಿ ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಜನರ ಗುಂಪಿನಿಂದ ತಪ್ಪಿಸಿಕೊಳ್ಳಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಅಲ್ಲದೇ ಜನಸಮೂಹ ಕೂಡ ತುಂಬಾನೇ ದೊಡ್ಡದಿತ್ತು. ನಮ್ಮ ಬಟ್ಟೆಗಳು ಹರಿದುಹೋಗುವ ಮಟ್ಟಿಗೆ ನಮ್ಮನ್ನು ಎಳೆದಾಡುತ್ತಿದ್ದರು. ಅನೇಕರು ನನ್ನ ಸಹಾಯಕ್ಕೆ ಬಂದರು. ಆದರೆ ಜನಸಮೂಹ ತುಂಬಾನೇ ದೊಡ್ಡದಿದ್ದ ಕಾರಣ ಅಪರಿಚಿತರ ಹಲ್ಲೆಯಿಂದ ಬಚಾವಾಗಲು ಆಗಲಿಲ್ಲ ಎಂದು ದೂರುದಾರ ಮಹಿಳೆ ಹೇಳಿದ್ದಾರೆ.
ಈ ಸಂಬಂಧ ಲಾಹೋರ್ ಠಾಣೆಯಲ್ಲಿ ನೂರಕ್ಕೂ ಅಧಿಕ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ದೂರುದಾರ ಮಹಿಳೆಯ ಉಂಗುರ ಹಾಗೂ ಕಿವಿಯೋಲೆಗಳನ್ನು ಕಸಿದುಕೊಂಡಿದ್ದಾರೆ. ಹಾಗೂ ಈಕೆಯ ಜೊತೆಯಿದ್ದ ವ್ಯಕ್ತಿಯಿಂದ ಮೊಬೈಲ್ ಫೋನ್, ಗುರುತಿನ ಚೀಟಿ ಹಾಗೂ 15 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.