ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಾನುವಾರ ಬಸ್ಸೊಂದು ಹೆದ್ದಾರಿಯಿಂದ ಪಲ್ಟಿಯಾಗಿ ಕಂದರಕ್ಕೆ ಬಿದ್ದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ.
70 ಜನರಿದ್ದ ಬಸ್ ಇರಾನ್‌ನಿಂದ ಪಂಜಾಬ್ ಪ್ರಾಂತ್ಯಕ್ಕೆ ಯಾತ್ರಾರ್ಥಿಗಳನ್ನು ವಾಪಸ್ ಕರೆತರುತ್ತಿದ್ದಾಗ ಹಬ್‌ನಲ್ಲಿ ಅಪಘಾತ ಸಂಭವಿಸಿದೆ.
ಸಿಂಧ್ ಪ್ರಾಂತ್ಯದ ಕರಾಚಿಯಿಂದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ವರೆಗೆ ಪಾಕಿಸ್ತಾನದ ಅರಬ್ಬಿ ಸಮುದ್ರದ ಕರಾವಳಿಯುದ್ದಕ್ಕೂ ವಿಸ್ತರಿಸಿರುವ 653 ಕಿಮೀ ರಾಷ್ಟ್ರೀಯ ಹೆದ್ದಾರಿಯಾದ ಮಕ್ರಾನ್ ಕರಾವಳಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಹೆಚ್ಚಿನ ಪ್ರಯಾಣಿಕರು ಲಾಹೋರ್ ಅಥವಾ ಗುಜ್ರಾನ್‌ವಾಲಾದಿಂದ ಬಂದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿ(ಡಿಸಿ) ಲಸ್ಬೆಲಾ ಹುಮೈರಾ ಬಲೋಚ್ ಪ್ರಕಾರ, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲಾಗಿದೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಲಾಸ್ಬೆಲಾ ನವೀದ್ ಆಲಂ ಅವರು, ಅತಿವೇಗದ ಕಾರಣ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಾಗ ಬಸ್ ಪಲ್ಟಿಯಾಗಿದೆ ಎಂದು ತಿಳಿಸಿದ್ದಾರೆ.