ಕುಖ್ಯಾತ ಡಾನ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಬೋಧಕರೊಬ್ಬರು ಕಣ್ಣೀರಿಟ್ಟು ಪ್ರಾರ್ಥಿಸಿರುವುದಕ್ಕೆ ಜನರ ಆಕ್ರೋಶವನ್ನ ಎದುರಿಸುತ್ತಿದ್ದಾರೆ.
ಇಸ್ಲಾಂ ಬೋಧಕ ತಾರೀಖ್ ಜಮೀಲ್ ರಾವಲ್ಪಿಂಡಿಯ ಕುಖ್ಯಾತ ಗ್ಯಾಂಗ್ ಸ್ಟರ್ ತಜಿ ಖೋಖರ್ ಗಾಗಿ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾವುಕರಾಗಿ ಆತನ ಆತ್ಮ ಶಾಂತಿಗಾಗಿ ಪ್ರಾರ್ಥಿಸುತ್ತಿರುವ ಫೋಟೊಗಳು ಆನ್ಲೈನ್ ನಲ್ಲಿ ವೈರಲ್ ಆಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ತಬ್ಲಿಘಿ ಜಮಾತ್‌ನೊಂದಿಗೆ ಗುರುತಿಸಿಕೊಂಡಿರುವ ಮೌಲಾನಾ ತಾರೀಖ್ ಜಮೀಲ್ ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕ್ರಿಮಿನಲ್ ಚಟುವಟಿಕೆಗಳು ಮತ್ತು ಭೂಕಬಳಿಕೆಯ ಆರೋಪಗಳಿಂದ ಕುಖ್ಯಾತಿ ಪಡೆದಿರುವ ತಾಜಿ ಖೋಖರ್ ಜನವರಿ 6 ರಂದು ಸಾವನ್ನಪ್ಪಿದ್ದಾನೆ.
ಕಳೆದ ವರ್ಷ ರಾವಲ್ಪಿಂಡಿ ಪೊಲೀಸರು ಈತನನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದ್ದರು. ಅಂತವನ ಸ್ಮರಣಾ ಕಾರ್ಯಕ್ರಮದಲ್ಲಿ ಬೋಧಕರಿಗೆ ಪ್ರಾರ್ಥನೆ ಮಾಡುವ ಪ್ರಮೇಯವೇನಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೌಲ್ವಿ ತಾರೀಖ್ ಜಮೀಲ್, ರಾವಲ್ಪಿಂಡಿಯ ದಿವಂಗತ ಭೂಗತ ಡಾನ್ ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಅವರು ಕೊಳೆಗೇರಿಯಲ್ಲಿ ಅಥವಾ ಬಡವರ ಮನೆಯಲ್ಲಿ ಪ್ರಾರ್ಥನೆ ಮಾಡುವುದನ್ನು ನಾನು ನೋಡಿಲ್ಲ, ಎಂದು ಪಾಕಿಸ್ತಾನದ ನಾಗರಿಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೊಬ್ಬರು ತಾರೀಖ್ ಅವ್ರನ್ನ “ಬಾಡಿಗೆ ಮೌಲಾನಾ” ಎಂದು ಕರೆದಿದ್ದಾರೆ. ಕೆಲವೊಮ್ಮೆ ಮೌಲಾನಾ ತಾರೀಖ್ ಜಮೀಲ್ ಅವರನ್ನ ಜನರು ಯಾಕಿಷ್ಟು ದ್ವೇಷ ಮಾಡುತ್ತಾರೆ ನನಗೆ ಅರ್ಥವಾಗುತ್ತಿಲ್ಲ, ಅವರು ತತ್ವಬದ್ಧ ಮತ್ತು ಶಿಸ್ತಿನ ಮೌಲಾನಾ, ಅವರು ಪ್ರಾರ್ಥನೆಗೆ ಹೋಗುತ್ತಾರೆ, ಖಾನ್ ಹಣ ನೀಡಿದರೆ ಅವರಿಗೆ ಶಿಸ್ತುಬದ್ಧರಾಗಿರುತ್ತಾರೆ. ಹಣ ಪಾವತಿಸಿದರೆ ಅವರಿಗೆ ಶಿಸ್ತು ತೋರಿಸುತ್ತಾರೆ ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಮೌಲಾನ ಅವರ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.