ಕಳೆದ ವಾರವಷ್ಟೇ ಸ್ವದೇಶಿ ನಿರ್ಮಿತ ಕೊರೊನಾ ಲಸಿಕೆ ತಯಾರಿಸುತ್ತಿರೋದ್ರ ಬಗ್ಗೆ ಮಾಹಿತಿ ನೀಡಿದ್ದ ಪಾಕಿಸ್ತಾನ ನಿನ್ನೆ (ಜೂನ್1 ) ತನ್ನ ಲಸಿಕೆಯನ್ನ ಬಿಡುಗಡೆ ಮಾಡಿದೆ.
ಚೀನಾದ ಔಷಧಿ ತಯಾರಕ ಕಂಪನಿಯಾದ ಕ್ಯಾನ್ಸಿನೋ ಬಯೋ ಜೊತೆ ಸೇರಿ ಅಭಿವೃದ್ಧಿಪಡಿಸಿದ ಈ ಲಸಿಕೆಗೆ ಪಾಕಿಸ್ತಾನ ಪಾಕ್ವಾಕ್ ಎಂದು ಹೆಸರಿಟ್ಟಿದೆ.
ಲಸಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪಾಕ್ ಆರೋಗ್ಯ ಸೇವೆ ಇಲಾಖೆಯ ಪ್ರಧಾನಿ ವಿಶೇಷ ಸಹಾಯಕ ಡಾ. ಫೈಸಲ್ ಸುಲ್ತಾನ್, ಕಷ್ಟಕರ ಸವಾಲುಗಳನ್ನ ದಾಟಲು ಎಂದಿಗೂ ಪರಿಹಾರವೊಂದು ಇದ್ದೇ ಇರುತ್ತೆ ಎಂದು ಹೇಳಿದ್ರು.
ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರ ಚೀನಾ ಸಹಾಯ ಮಾಡಿದೆ. ಕಚ್ಚಾ ವಸ್ತುಗಳನ್ನ ಬಳಕೆ ಮಾಡಿ ಲಸಿಕೆಯನ್ನ ಅಭಿವೃದ್ಧಿ ಪಡಿಸಲು ಸಾಕಷ್ಟು ಶ್ರಮದ ಅಗತ್ಯವಿದೆ. ಇದಕ್ಕೆ ಚೀನಾ ನಮಗೆ ತುಂಬಾನೇ ಸಹಾಯ ಮಾಡಿದೆ. ಕೊರೊನಾ ಲಸಿಕೆಯ ಗುಣಮಟ್ಟವನ್ನ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಸಂಸ್ಥೆ ಸಿಬ್ಬಂದಿಯ ಪರಿಶ್ರಮ ಗೌರವ ಪಡೆಯಲು ಅರ್ಹವಾಗಿದೆ ಎಂದು ಫೈಸಲ್ ಹೇಳಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಲಸಿಕೆಯನ್ನ ಸ್ಥಳೀಯವಾಗಿ ಉತ್ಪಾದಿಸಲಿದ್ದೇವೆ ಎಂದು ಹೇಳಿದ್ರು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ರಾಷ್ಟ್ರೀಯ ಕಮಾಂಡ್ ಹಾಗೂ ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಅಸರ್ ಉಮರ್, ಪಾಕಿಸ್ತಾನದ ಪಾಲಿಗೆ ಇದೊಂದು ಪ್ರಮುಖವಾದ ದಿನವಾಗಿದೆ. ಕೊರೊನಾ ವೈರಸ್ ಕೇವಲ ಪಾಕ್ಗೆ ಮಾತ್ರವಲ್ಲ ಬದಲಾಗಿ ಇಡೀ ವಿಶ್ವಕ್ಕೆ ಒಂದು ದೊಡ್ಡ ಸವಾಲಿನ ವಿಷಯವಾಗಿದೆ. ಪಾಕಿಸ್ತಾನ ಕೊರೊನಾ ನಿರ್ವಹಣೆಯನ್ನ ಚೆನ್ನಾಗಿ ಮಾಡುತ್ತಿದೆ. ಉಳಿದ ದೇಶಗಳಂತೆ ನಮ್ಮಲ್ಲಿ ಅಷ್ಟೊಂದು ಕಠೋರವಾಗಿ ಸೋಂಕು ಹಬ್ಬುತ್ತಿಲ್ಲ. ದೇಶದಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡಿದ್ದೇವೆ ಎಂದು ಹೇಳಿದ್ರು.